Advertisement

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ

01:08 AM Dec 06, 2020 | mahesh |

ಹೊಸದಿಲ್ಲಿ: “ದೇಶದ ಬೆನ್ನೆಲುಬು’ ಸರಕಾರ ದ 5ನೇ ಸುತ್ತಿನ ಮಾತುಕತೆಗೂ ಬಾಗಲಿಲ್ಲ! “ಒಂದೋ ಕಾಯ್ದೆ ರದ್ದುಮಾಡಿ ಅಥವಾ ನಮ್ಮನ್ನು ಶೂಟ್‌ ಮಾಡಿ. ಸರಕಾರ ಹೇಳಿದ್ದನ್ನೇ ಮತ್ತೆಮತ್ತೆ ಹೇಳುತ್ತಿದೆ, ಇದಕ್ಕೆ ಉತ್ತರಿಸೋ ಬದಲು ಮಾತಾಡದಿರುವುದೇ ಲೇಸು’ ಎನ್ನುವ ಮೂಲಕ ರೈತ ಮುಖಂಡರೆಲ್ಲ “ಮೌನವ್ರತ’ ತಾಳಿ, ವಿಜ್ಞಾನ ಭವನದ ಸಭೆಯಲ್ಲಿ ಸರಕಾರಕ್ಕೆ ಸವಾಲೆಸೆದರು.

Advertisement

ಎಲ್ಲ ರೈತರ ಮುಂದೆ “ಯೆಸ್‌/ನೋ’ ಫ‌ಲಕಗಳಿದ್ದವು. ಕಾಯ್ದೆ ರದ್ದು ಮಾಡ್ತೀರೋ, ಇಲ್ಲವೋ ಎನ್ನುವುದಷ್ಟೇ ರೈತರ ಪ್ರಶ್ನೆ. ಕೊನೆಗೂ ರೈತರ ಮನವೊಲಿಸುವಲ್ಲಿ ವಿಫ‌ಲವಾದ ಸರಕಾರ ಡಿ.9ಕ್ಕೆ ಮುಂದಿನ ಮಾತುಕತೆಗೆ ಮುಹೂರ್ತ ನಿಗದಿಮಾಡಿದೆ. ಈಗಾಗಲೇ ಘೋಷಿಸಿ ದಂತೆ, ರೈತ ಸಂಘಟನೆಗಳು ಡಿ.8ರಂದು “ಭಾರತ್‌ ಬಂದ್‌’ ನಿಲುವಿಗೆ ಬದ್ಧವಾಗಿವೆ.

ಬೀದಿಯಲ್ಲೇ ಇರ್ತೀವಿ!: “ನಮಗೆ ಕಾರ್ಪೋರೆಟ್‌ ಕೃಷಿ ಬೇಡ. ಇದು ಸರಕಾರ ಕ್ಕಷ್ಟೇ ಲಾಭ. ಒಂದು ವರ್ಷದವರೆಗೆ ಬೇಕಾಗುವ ವಸ್ತುಗಳನ್ನೆಲ್ಲ ನಾವು ತಂದಿದ್ದೇವೆ. ಕಳೆದ ಕೆಲವು ದಿನಗಳಿಂದ ನಾವು ಬೀದಿಯಲ್ಲೇ ಕಳೆಯುತ್ತಿದ್ದೇವೆ. ಸರಕಾರ ನಮ್ಮನ್ನು ಅಲ್ಲೇ ಬಿಡಲು ಬಯಸಿದರೆ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನಾವು ಹಿಂಸಾ ಹಾದಿ ತುಳಿಯುವುದಿಲ್ಲ’ ಎಂದು ಸಭೆಯ ಆರಂಭದಲ್ಲಿ ರೈತರು ಸ್ವಾಭಿಮಾನದ ಮಾತುಗಳನ್ನಾಡಿದರು.

ಮೌನ ಅಸ್ತ್ರ: ಕೇಂದ್ರ ಸರಕಾರ ಕರೆದಿದ್ದ ಶನಿವಾರದ ಸಭೆ 9 ಗಂಟೆ ನಿರಂತರವಾಗಿ ನಡೆದರೂ, ಅದರಲ್ಲಿ ಹೆಚ್ಚು ಮಾತನಾಡಿದ್ದು ಮಾತ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಪಿಯೂಷ್‌ ಗೋಯಲ್‌ ಮತ್ತು ಹಿರಿಯ ಅಧಿಕಾರಿಗಳಷ್ಟೇ. ನೋಡುವಷ್ಟು ನೋಡಿ, ಹೈರಾಣಾದ ರೈತರು “ನಾವು ಮೌನವಾಗಿದ್ದೇವೆ. ಇನ್ನು ಹೆಚ್ಚು ಮಾತನಾಡೆವು. ಸರಕಾರ ಅದೇ ವಾದವನ್ನೇ ಮುಂದಿ ಡುತ್ತಿದೆ. ಸರಕಾರ ಕ್ಕೆ ಮಾತುಕತೆ ಬೇಕು. ನಮಗೆ ಕಾಯ್ದೆ ವಾಪಸಾಗಬೇಕು’ ಎಂದು ರೈತ ಮುಖಂಡರು ಹೇಳಿ, ಮತ್ತೆ ಮೌನಕ್ಕೆ ಜಾರಿದರು.

ಆಮಿಷಕ್ಕೂ ಜಗ್ಗಲಿಲ್ಲ: “ಕೃಷಿ ಕಾಯ್ದೆಗಳನ್ನು ಒಪ್ಪಿ ಕೊಂಡರೆ, ರೈತರ ಎಲ್ಲ ಬೇಡಿಕೆಗಳನ್ನು ಸರಕಾರ ಈಡೇರಿಸಲಿದೆ. ಕಳೆ ಸುಡುವಿಕೆ ಸಂಬಂಧ ರೈತರ ವಿರುದ್ಧ ವಿ ರುವ ಎಲ್ಲ ಪ್ರಕರಣಗಳನ್ನೂ ನಾವು ಕೈಬಿಡುತ್ತೇವೆ’ ಎಂದು ಸರಕಾರ ಆಫ‌ರ್‌ ನೀಡಿದರೂ, ರೈತರ ಉತ್ತರ ಅದೇ “ಮೌನ’!

Advertisement

ವಿಶೇಷ ಅಧಿವೇಶನ: “ಎಲ್ಲರೂ ಒಪ್ಪಿತ ಮಸೂದೆ ಯನ್ನು ನೀವು ತಿರಸ್ಕರಿಸುತ್ತಿದ್ದೀರಿ’ ಎಂದು ಸರಕಾರ ಎಷ್ಟೇ ಹೇಳಿದರೂ, ರೈತರು ಅದಕ್ಕೆ ಪ್ರತಿಯಾಡಲಿಲ್ಲ. ಕಾಯ್ದೆಯ ಸಾಧಕ- ಬಾಧಕಗಳ ಮತ್ತಷ್ಟು ಚರ್ಚೆಗೆ ವಿಶೇಷ ಅಧಿವೇಶನ ಕರೆಯುವ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ.

ರೈತರು ಪ್ರಧಾನವಾಗಿ ಮುಂದಿಟ್ಟ ಸಮಂಜಸ ಬೇಡಿಕೆಗಳನ್ನು ಕಾಯ್ದೆಯಲ್ಲಿ ಅಳವಡಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ “ಕನಿಷ್ಠ ಬೆಂಬಲ ಬೆಲೆ’, “ಮಂಡಿ ವ್ಯವಸ್ಥೆ ಮುಂದುವರಿಕೆ’- ವಿಚಾರಗಳ ಬಗ್ಗೆ ಸರಕಾರ ಇನ್ನಷ್ಟು ಚರ್ಚೆ, ರಾಜ್ಯ ಸರಕಾರ ಗಳ ಅಭಿಪ್ರಾಯ ಕಲೆಹಾಕಲು ಕಾಲಾವಕಾಶವನ್ನೂ ಕೇಂದ್ರ ಸರಕಾರ ಕೋರಿದೆ.

ಸರಕಾರದ ಚಹಾ ಮುಟ್ಟಲಿಲ್ಲ!
ಪ್ರತಿಭಟನನಿರತ ರೈತ ಮುಖಂಡರು ವಿಜ್ಞಾನಭವನದ ಸಭೆಗೆ ಆಗಮಿಸುವಾಗ ತಾವೇ ಸಿದ್ಧಪಡಿಸಿದ ದಾಲ್‌- ರೋಟಿ, ಚಹಾವನ್ನು ತಂದಿದ್ದರು. ಸರಕಾರ ದ ಯಾವ ಸತ್ಕಾರವನ್ನೂ ಸ್ವೀಕರಿಸದೆ ರೈತರು ಸ್ವಾಭಿಮಾನ ಮೆರೆದರು.

ಬ್ರಿಟಿಷ್‌ ಸಂಸದರ ಬೆಂಬಲ
ರೈತರ ಪ್ರತಿಭಟನೆ ಪರ ಜಾಗತಿಕ ಧ್ವನಿಗಳು ಒಂದುಗೂಡುತ್ತಲೇ ಇವೆ. ಕೆನಡಾ ಪ್ರಧಾನಿ “ದಿಲ್ಲಿ ಚಲೋ’ಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ 38 ಬ್ರಿಟಿಷ್‌ ಸಂಸದರು, “ರೈತರ ಪ್ರತಿಭಟನೆ ವಿಚಾರದಲ್ಲಿ ಬ್ರಿಟನ್‌ ಮಧ್ಯಸ್ಥಿಕೆ ವಹಿಸಬೇಕು’ ಎಂದು ಒತ್ತಾಯಿಸಿ ಯುಕೆ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಭಾರತದ ನೂತನ ಕೃಷಿ ಕಾಯ್ದೆಗಳನ್ನು ಸಂಸದರ ಪತ್ರವು “ಡೆತ್‌ ವಾರೆಂಟ್‌’ಗೆ ಹೋಲಿಸಿದೆ. “ಭಾರತ ಸರಕಾರ ದೊಂದಿಗೆ ಕೂಡಲೇ ಈ ಬಗ್ಗೆ ಮಾತುಕತೆ ನಡೆಸಿ, ಕಾಯ್ದೆ ವಾಪಸ್‌ ತೆಗೆದುಕೊಳ್ಳಲು ಸಲಹೆ ನೀಡಬೇಕು’ ಎಂದು ಕಾರ್ಯದರ್ಶಿ ಡೊಮನಿಕ್‌ ರಾಬ್‌ ಅವರಿಗೆ ಪತ್ರದಲ್ಲಿ ಸಂಸದರು ಕಳವಳ ಸೂಚಿಸಿದ್ದಾರೆ.

ಪ್ರತಿಭಟನೆ ಬಿಡಿ: ತೋಮರ್‌
“ದಿಲ್ಲಿಯ ಚಳಿ ಘನಘೋರವಾಗಿದೆ. ಇಲ್ಲಿನ ನಾಗರಿಕರಿಗೆ ನಿಮ್ಮ ಪ್ರತಿಭಟನೆಯಿಂದ ಸೋಂಕು ಹಬ್ಬುವ ಭೀತಿ ಎದುರಾಗಿದೆ. ನಿಮ್ಮಲ್ಲಿ ಹಲವರು ಹಿರಿಯ ನಾಗರಿಕರು, ಮಕ್ಕಳು ಇದ್ದೀರಿ. ದಯವಿಟ್ಟು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಿ…’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವಿನಂತಿಸಿದರು.

ದಿಲ್ಲಿ ಚಲೋ ಎಫೆಕ್ಟ್
– ಕೊರೊನಾ ಬಿಕ್ಕಟ್ಟಿ ನಿರ್ವಹಣೆ ಕುರಿತು ಕೆನಡಾ ಕರೆದಿದ್ದ ಸಭೆಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಗೈರಾಗಿದ್ದರು. ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲಿಸಿದ್ದಕ್ಕೆ ಕೇಂದ್ರ ಈ ಕ್ರಮ ಅನುಸರಿಸಿದೆ.
– ಬಾಲಿವುಡ್‌- ಪಂಜಾಬಿ ಸಿನೆಮಾಗಳ ಖ್ಯಾತ ಗಾಯಕ ದಿಲ್ಜಿತ್‌ ದೋಸಂಝ್ ಕೂಡ ರೈತರಿಗೆ ಬೆಂಬಲ
– “ಜನರು, ರೈತರು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಹೊಂದಿದ್ದಾರೆ. ಭಾರತ ಅದಕ್ಕೆ ಆಸ್ಪದ ನೀಡಬೇಕು’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟೆರ್ರೆಸ್‌ ಕಿವಿಮಾತು ಹೇಳಿದ್ದಾರೆ.
– ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಬ್ಯಾರಿಕೇಡ್‌ ಮುರಿ ಯಲೆತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.
– ಜಲಂಧರ್‌ನ ದಿಲ್ಲಿಯತ್ತ ಸಾಗುವ ಮಾರ್ಗದಲ್ಲಿ ರೈತರ ಪ್ರತಿಭಟನೆ ಶನಿವಾರವೂ ಮುಂದುವರಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next