ಅರಸೀಕೆರೆ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಗೆ ಕ್ವಿಂಟಲ್‌ಗೆ 20 ಸಾವಿರ ರೂ.ಬೆಂಬಲ ಬೆಲೆ ನೀಡಬೇಕೆಂದು ಸರ್ಕಾರಕ್ಕೆ ಮಾಡಾಳು ನಿರಂಜನ ಪೀಠದ ಶ್ರೀರುದ್ರಮುನಿ ಸ್ವಾಮಿ ಆಗ್ರಹಿಸಿದರು.
ನಗರದ ಎಪಿಎಂಸಿ ಮುಖ್ಯದ್ವಾರದ ಗೇಟ್ ಬಂದ್ ಮಾಡಿ ರೈತ ಮುಖಂಡ ಹೊಳೆಯಪ್ಪ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ರೈತರ ಹೋರಾಟ ಬೆಂಬಲಿಸಿ ಶ್ರೀ ಗಳು ಮಾತನಾಡಿದರು. ದೇಶಕ್ಕೆ ಅನ್ನದಾತನಾಗಿರುವ ರೈತನ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತ ಸಮುದಾಯ ಸಂಕಷ್ಟ ಸಿಲುಕಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗದಿದ್ದರೇ ಅತ ಜೀವನ ಹೇಗೆ ತಾನೇ ನಡೆಸಬೇಕು ಎಂಬ ವಿವೇಚನೆ ನಮ್ಮನಾಳುವ ಪ್ರಬುದ್ಧ ರಾಜಕಾರಣಿಗಳಿಗೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದರು.
ರೈತರ ಹೋರಾಟ ಬೆಂಬಲಿಸಿ: ಅರಸೀಕೆರೆ ತಾಲೂಕಿನ ಕೊಬ್ಬರಿಗೆ ಹೊರ ರಾಜ್ಯಗಳಲ್ಲಿ ಉತ್ತಮ ಬೆಲೆಯಿದೆ. ಕ್ವಿಂಟಲ್‌ಗೆ 18 ಸಾವಿರ ರೂ. ಗಳವರೆಗೂ ಖರೀದಿ ನಡೆದಿದೆ. ಆದರೆ ಇಂದು ಕೊಬ್ಬರಿಗೆ ಮಾರುಕಟ್ಟೆಯಲ್ಲಿ 8 ಸಾವಿರಕ್ಕೆ ದರ ಕುಸಿದಿದೆ. ನಫೆಡ್ ಕೇಂದ್ರದ ಮೂಲಕ ಕ್ವಿಂಟಲ್ ಕೊಬ್ಬರಿಗೆ 11.750 ರೂ ಕೊಟ್ಟು ಖರೀದಿಸಲಾಗುತ್ತಿತ್ತು. ಈಗ ನಫೆಡ್ ಕೇಂದ್ರ ಮುಂಚಲಾಗಿದೆ. ಆದ್ದರಿಂದ ತಾಲೂಕಿನ ಮಠಾಧೀಶರು ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕು. ಮಠಾಧೀಶರು ಹೋರಾಟಕ್ಕೆ ಇಳಿ ಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ನಫೆಡ್ ಅಧಿಕಾರಿಗಳಿಂದ ಅನ್ಯಾಯ: ರೈತ ಮುಖಂಡ ಹೊಳೆಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ರೈತರಿಂದ ಕ್ವಿಂಟಲ್‌ಗೆ 11.750 ರೂ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ನಫೆಡ್ ಕೇಂದ್ರ ಸ್ಥಾಪಿಸಿತ್ತು. ಇಲ್ಲಿನ ಅಧಿಕಾರಿಗಳು ಉತ್ತಮ ಗುಣಮಟ್ಟವಿಲ್ಲ ಎಂದು ದೊಡ್ಡ ಗಾತ್ರ ಮತ್ತು ಸಣ್ಣ ಗಾತ್ರದ ಕೊಬ್ಬರಿ ವಿಂಗಡಣೆ ಮಾಡಿ ಅರ್ಧಕ್ಕೆ ಅರ್ಧ ಕೊಬ್ಬರಿ ಖರೀದಿಸಲು ಸಾಧ್ಯವಿಲ್ಲ ಎಂದು ಸುಳ್ಳು ಹೇಳಿ ಕೊಬ್ಬರಿ ಗಾತ್ರದಲ್ಲಿ ಸಣ್ಣದಿದ್ದು, ಗುಣಮಟ್ಟದಲ್ಲಿ ಉತ್ತಮವಾಗಿದ್ದರು ನಮ್ಮಿಂದ ಈ ಕೊಬ್ಬರಿ ಖರೀದಿ ಸದೆ ಬಿಟ್ಟ ಪರಿಣಾಮ ಅಂತಹ ಕೊಬ್ಬರಿಯನ್ನು ವರ್ತಕರು ಖರೀದಿಸದೆ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ನಷ್ಟವಾಯಿತು ಎಂದು ದುಃಖ ತೊಡಿಕೊಂಡರು.
ಸಹಾಯ ಧನ ನೀಡಿ: ರೈತ ಮುಖಂಡ ಬೊರನಕೊಪ್ಪಲು ಶಿವಲಿಂಗಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಬ್ಬರಿಗೆ ಬೆಲೆ ಕುಸಿತದ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಧನ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಪರಿಸರ ಪ್ರೇಮಿ ಅಣ್ಣಾನಾಯಕನಹಳ್ಳಿ ವಿಜಯಕುಮಾರ್, ಮಲ್ಲೇಶ್, ಗೀಜೀಹಳ್ಳಿ ಮನು, ಮುದ್ದನಹಳ್ಳಿ ಕುಮಾರ್, ಸೇರಿದಂತೆ ಕಡೂರು, ಹೊಳಲ್ಕೆರೆ, ಹೊಸದುರ್ಗ, ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ನಂತರ ಪ್ರತಿಭಟನಕಾರರು ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.