ಮೈಸೂರು: ಭತ್ತ, ರಾಗಿ, ಜೋಳವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಪೂರ್ಣ ಖರೀದಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರರೈತರು ಪ್ರತಿಭಟನೆ ನಡೆಸಿದರು.
ದಂಡ ಕೈಬಿಡಿ: ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್, ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಸಬೇಕು. ನಿಗದಿತ ಕೋಟಾಗಿಂತ ಕಡಿಮೆ ಮಾರಾಟ ಮಾಡಿದ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿರುವ ದಂಡವನ್ನು ಕೈಬಿಡಬೇಕು, ರಸಗೊಬ್ಬರ ಬೆಲೆ ಇಳಿಸ ಬೇಕು, ಕರ ನಿರಾಕರಣ ಚಳವಳಿಗಾರರ ಮನೆ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಮಾಡ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಡಿಮೆ ಬೆಲೆಗೆ ರೈತರಿಂದ ಖರೀದಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷಿಸಿ ಆಡಳಿತ ನಡೆಸುತ್ತಿವೆ. ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳವನ್ನು ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಖರೀದಿಸಲಾಗುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ನೀತಿಗೆ ಅರ್ಥವಿಲ್ಲದಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರಿಗೆ ಇನ್ನೂ ನ್ಯಾಯ ದೊರಕಿಸಿಲ್ಲ: ಮೈಸೂರು ತಾಲೂಕು ಕೋಚನಹಳ್ಳಿ ರೈತರಿಗೆ ಭೂ ಖರೀದಿ ಯಲ್ಲಿ ವಂಚಿಸಲಾಗಿದೆ. ಸರ್ಕಾರ ಈ ರೈತರಿಗೆ ಇನ್ನೂ ನ್ಯಾಯ ದೊರಕಿಸಿಲ್ಲ. ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಇನ್ನು ಮುಂದೆ ಬಾರುಕೋಲು ಚಳವಳಿ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿದ್ದರು.