ಜೇವರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಜೇರಟಗಿ ಗ್ರಾಪಂ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಗ್ರಾಮ ಘಟಕದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು. ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷ ಪೀರಪ್ಪ ಮಾದರ ನೇತೃತ್ವದಲ್ಲಿ ನೂರಾರು ಜನ ರೈತರು, ಮಹಿಳೆಯರು, ಕೂಲಿಕಾರ್ಮಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪೀರಪ್ಪ, ಯಾತನೂರ ಗ್ರಾಮದ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಡಬೇಕೆಂದು ಫಾರಂ ನಂ. 6ನ್ನು ಸಲ್ಲಿಸಿದ್ದರೂ ಕೆಲಸ ಕೊಡುತ್ತಿಲ್ಲ. ಕೆಲವೊಂದಿಷ್ಟು ಕೂಲಿ ಕಾರ್ಮಿಕರಿಗೆ ಮಾತ್ರ ಕೆಲಸ ಕೊಟ್ಟು ಉಳಿದ ಕೂಲಿ ಕಾರ್ಮಿಕರಿಗೆ ಕೆಲಸ ನಿರಾಕರಿಸುತ್ತಿದ್ದಾರೆ.
ಹೊಸ ಬಿಪಿಎಲ್ ಕಾರ್ಡ್‌ಗಾಗಿ ಸುಮಾರು ವರ್ಷಗಳಿಂದ ಅರ್ಜಿ ಹಾಕುತ್ತಾ ಬಂದರೂ ಇಲ್ಲಿಯವರೆಗೆ ಯಾರಿಗೂ ಹೊಸ ಕಾರ್ಡ್ ವಿತರಿಸಿಲ್ಲ. ಕಾರಣ ಅರ್ಜಿ ಹಾಕಿದ ಎಲ್ಲಾ ಬಡವರಿಗೆ ಹೊಸ ರೇಷನ್ ಕಾರ್ಡ್ ಮಂಜೂರಿ ಮಾಡಬೇಕು. ಪ್ರತಿ ರೇಷನ್ ಕಾರ್ಡಿಗೆ 50 ಕೆ.ಜಿ. ಅಕ್ಕಿ, 10 ಕೆ.ಜಿ. ಗೋಧಿ, ಸಕ್ಕರೆ, ತೊಗರಿ ಬೇಳೆ ಸೇರಿದಂತೆ ಒಟ್ಟು 14 ಆಹಾರ ಧಾನ್ಯಗಳನ್ನು ವಿತರಿಸಬೇಕು.
ಸಾಮಾಜಿಕ ಭದ್ರತೆಯ ಅಂಗವಿಕಲ, ವಿಧವಾ, ಸಂಧ್ಯಾ ಸುರûಾ, ವೃದ್ಧರಿಗೆ ಮಾಸಾಶನವನ್ನು ಪ್ರತಿ ತಿಂಗಳು ಹಂಚದೆ 4- 5 ತಿಂಗಳಿಗೊಮ್ಮೆ ವಿತರಿಸುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಬಹುಸಂಖ್ಯಾತ ವೇತನದಾರರು ಮಾಶಾಸನದ ಹಣದ ಮೇಲೆ ಅವಲಂಬಿತರಾಗಿದ್ದು, ಕೂಡಲೇ ಅವರಿಗೆ ತಿಂಗಳ 10ನೇ ತಾರಿಖೀನೊಳಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ತಹಶೀಲ್ದಾರ ಪರ ಆಗಮಿಸಿದ ಆಹಾರ ನಿರೀಕ್ಷಕ ಡಿ.ಬಿ.ಪಾಟೀಲ ಸೂಕ್ತ ಭರವಸೆ ನೀಡಿದ ಮೇಲೆ ಧರಣಿ ಅಂತ್ಯಗೊಳಿಸಲಾಯಿತು. ಸುಭಾಷ ಹೊಸಮನಿ, ಸಿದ್ಧರಾಮ ಹರವಾಳ, ಸಿದ್ಧರಾಮ ಮಾಡಗಿ ಇತರರು ಪಾಲ್ಗೊಂಡಿದ್ದರು.