ರಾಯಚೂರು: ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಖರೀದಿ ಕೇಂದ್ರಗಳ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರ ತುರ್ತು ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಬಳಿಕ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು. ರೈತರು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದು, ಪರಿಹರಿಸಬೇಕಾದ ಸರ್ಕಾರಗಳು ರೈತ, ಕಾರ್ಮಿಕ, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಜನಜೀವನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂಥ ವೇಳೆ ಸರ್ಕಾರಗಳು ದುಡಿವ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿದ ರೈತರಿಗೆ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು. ಜಿಲ್ಲಾದ್ಯಂತ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಸರ್ಕಾರ ನಿಗದಿಪಡಿಸಿದಂತೆ ಕೃಷಿ ಪಂಪ್‌ಸೆಟ್ ಗಳಿಗೆ ಏಳು ಗಂಟೆ ಬದಲು 10 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಸಬೇಕು. ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.
ಮುಂಗಾರು ಬೆಳೆಗಳು ಕಟಾವಿಗೆ ಬಂದಿದ್ದು, ಧಾನ್ಯಗಳ ಬೆಲೆ ಕುಸಿದಿದೆ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾಗಬೇಕು. ಸಿರವಾರ ಹಾಗೂ ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು. ಎನ್ ಆರ್‌ಬಿಸಿ ಕಾಲುವೆ ನಿರ್ಮಾಣಕ್ಕೆ ಕುರುಕುಂದಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಕೂಡಲೇ ಪರಿಹಾರ ಹಣ ಪಾವತಿಸಬೇಕು. ಹಟ್ಟಿ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ಉಪಾಧ್ಯಕ್ಷ ದೊಡ್ಡಬಸನಗೌಡ ಬಲ್ಲಟಗಿ, ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ಕಾರ್ಯದರ್ಶಿ ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಸುಗೂರಯ್ಯ ಆರ್.ಎಸ್.ಮಠ, ಸದಸ್ಯರಾದ ಮಲ್ಲಣ್ಣ ದಿನ್ನಿ, ಬಸವರಾಜ ಮಲ್ಲಿನ ಮಡಗು, ಲಿಂಗಾರೆಡ್ಡಿ ಪಾಟೀಲ, ವೀರೇಶ ಕಂಬಳಿ, ಜಿಂದಾವಲಿಸಾಬ್, ಪ್ರಭಾಕರ ಪಾಟೀಲ, ಮಲ್ಲನಗೌಡ ದದ್ದಗಿ, ರಾಮನಗೌಡ ಗಣೇಕಲ್, ಚಂದ್ರಕಾಂತಸ್ವಾಮಿ, ವೆಂಕಟರೆಡ್ಡಿ, ಭೀಮೇಶ್ವರರಾವ್, ವೀರನಗೌಡ ಹಟ್ಟಿ, ದೇವರಾಜ ನಾಯಕ ಸೇರಿ ಅನೇಕರಿದ್ದರು.