Advertisement

ಬಿಡಿಎ ಕಚೇರಿ ಎದುರು ರೈತರ ಧರಣಿ

06:46 AM Mar 13, 2019 | Team Udayavani |

ಬೆಂಗಳೂರು: ಫೆರಿಫೆರಲ್‌ರಿಂಗ್‌ ರಸ್ತೆ ಮತ್ತು ಶಿವರಾಮ ಕಾರಂತ ಬಡಾವಣೆಗಳ ಯೋಜನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು ನಗರ ಜಿಲ್ಲಾ ಸಮಿತಿ, ರೈತರೊಡಗೂಡಿ ಮಂಗಳವಾರದಿಂದ ಬಿಡಿಎ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿ ಆರಂಭಿಸಿದೆ.

Advertisement

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಧರಣಿ ಆರಂಭಿಸಿರುವ ರೈತರು ಮತ್ತು ಶಿವರಾಮ ಕಾರಂತ ಬಡಾವಣೆ ನಿವಾಸಿಗಳು,ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಘೋಷಣೆ ಕೂಗಿದರು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಈಗ ರೈತರನ್ನು ಮರೆತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

 ಸರ್ಕಾರ ಈಗ ರೈತರ ಮನವಿಗೆ ಸ್ಪಂದಿಸಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಹತ್ತು-ಹದಿನೈದು ವರ್ಷಗಳ ಸಮಸ್ಯೆ ಚುನಾವಣಾ ನೀತಿ ಸಂಹಿತೆ ಇದಕ್ಕೆ ಅನ್ವಯವಾಗುವುದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗಿದ್ದು, ರೈತರ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಸಿರು ಸೇನೆಯ ಬೆಂಗಳೂರು ನಗರ ಸಮಿತಿಯ ಮುಖಂಡ ರಘು ಮಾತನಾಡಿ, ಬಿಡಿಎ ರೈತರಿಂದ ಭೂಮಿಯನ್ನು ಪಡೆದುಕೊಂಡು ಹಣವಂತರಿಗೆ ಸೈಟ್‌ ಮಾಡಿಕೊಡಲು ಹೊರಟಿದೆ.ಇದಕ್ಕೆ ರೈತರು ಅವಕಾಶ ಕೂಡುವುದಿಲ್ಲ.ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಈ ಸಂಬಂಧ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಅನೇಕಲ್‌, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ, ಗಾಣಿಗರಹಳ್ಳಿ, ಬ್ಯಾಲೆಕೆರೆ, ಕಾಂತಮ್ಮನಹಳ್ಳಿ, ರಾಮಗೊಂಡನಹಳ್ಳಿ ಸೇರಿದಂತೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಹಲವು ಗ್ರಾಮಗಳಿಂದ ಆಗಮಿಸಿದ ರೈತರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಬಿಡಿಎಗೆ ಬೀಗ ಹಾಕಬೇಕು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಬಿಡಿಎಗೆ ಸರ್ಕಾರ ಕೂಡಲೇ ಬೀಗಹಾಕಬೇಕು. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಸಂಬಂಧ ಹಿರಿಯ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದು,ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಶಿವರಾಮ ಕಾರಂತ ಬಡಾವಣೆ ನಿವಾಸಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಯಲ್ಲೆ ಕೃಷ್ಣಪ್ಪ ಆಗ್ರಹಿಸಿದರು.

“ಡ್ರೋಣ್‌ ಸರ್ವೇ’ ಆರಂಭವಾಗಿದೆ:  ಶಿವರಾಮ ಕಾರಂತ ಬಡಾವಣೆಯಲ್ಲಿ ಸರ್ವೇ ಕಾರ್ಯ ಮಾಡಲು ರೈತರು ಬಿಡುತ್ತಿಲ್ಲ.ಆ ಹಿನ್ನೆಲೆಯಲ್ಲಿ “ಡ್ರೋಣ್‌ ಸರ್ವೇ’ ಈಗಾಗಲೇ ಆರಂಭವಾಗಿದ್ದು,ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು.ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆಯೋ ಅದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದ್ಧವಾಗಿರುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next