ಅರಸೀಕೆರೆ: ಕೃಷಿ ಹೊಂಡ ಯೋಜನೆಯಲ್ಲಿ ಸಹಾಯಧನ ನೀಡಲು ಕೃಷಿ ಇಲಾಖೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಆಪಾದಿಸಿ ತಾಲೂಕಿನ ಜಾವಗಲ್‌ಹೋಬಳಿ ವ್ಯಾಪ್ತಿಯ ರೈತರು ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೃಷಿ ಇಲಾಖೆಯ ಕಚೇರಿ ಮುಂಭಾಗ ಗುರುವಾರ ಬೆಳಗ್ಗೆ ತಾಲೂಕಿನ ಕರಗುಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್ ಮತ್ತು ರೈತ ಮುಖಂಡ ಅಶೋಕ್ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ರೈತರ ಶೋಷಣೆ: ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಕೃಷಿ ಇಲಾಖೆಯ ನಿರ್ದೇಶನದಂತೆ 50 ಕ್ಕೂ ಹೆಚ್ಚು ರೈತರು ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಹೊಂಡಗಳನ್ನು ಈಗಾಗಲೇ ನಿರ್ಮಿಸಿಕೊಂಡಿದ್ದಾರೆ.
ಇದಕ್ಕೆ ಸರ್ಕಾರದಿಂದ ನೀಡಬೇಕಾದ ಸಹಾಯ ದನ ನೀಡಲು ಕೃಷಿ ಇಲಾಖೆ ಅಧಿಕಾರಿಗಳು ರೈತರಿಂದ ಒತ್ತಾಯ ಪೂರ್ವಕವಾಗಿ ಹತ್ತು ಸಾವಿರ ರೂ. ಲಂಚ ಕೇಳುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಅಶೋಕ್, ಜಿಲ್ಲಾ ರೈತ ಸಂಘದ ಸಂಚಾಲಕ ಶಿವಲಿಂಗಪ್ಪ ರಾಜ್ಯ ಕನ್ನಡ ಪಡೆ ಅಧ್ಯಕ್ಷ ವೆಂಕಟೇಶ್, ರೈತ ಮುಖಂಡರಾದ ನಾಗರಾಜ ರೆಡ್ಡಿ, ಮನೋಜ್ ಕಲ್ಯಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಣ್ಣ ಗಿರಿಯಪ್ಪ ರಂಗಪ್ಪ ಪಾಲ್ಗೊಂಡಿದ್ದರು.