ಅರಸೀಕೆರೆ: ನಫೆಡ್ ಖರೀದಿ ಕೇಂದ್ರದ ಅಧಿಕಾರಿಗಳು ರೈತರಿಂದ ಕೊಬ್ಬರಿ ಖರೀದಿಸದೆ ಕಳೆದ 10ದಿನ ಗಳಿಂದ ರೈತರನ್ನು ಸತಾಯಿಸುತ್ತಿದ್ದು, ಇದ ರಿಂದ ಮನೆ-ಮಠ ಬಿಟ್ಟು ರೈತರು ಮಾರುಕಟ್ಟೆಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೊಬ್ಬರಿ ಖರೀದಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಎಪಿಎಂಸಿ ಗೇಟ್ ಮುಂಭಾಗ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ ಹಿನ್ನೆಲೆ ಸರ್ಕಾರ ನಫೆಡ್ ಕೇಂದ್ರದ ಮೂಲಕ ಬೆಂಬಲ ಬೆಲೆಯಲ್ಲಿ ರೈತರಿಂದ ಕೊಬ್ಬರಿ ಖರೀದಿಸಲು ಪ್ರಾರಂಭಿಸಿದೆ. ಆದರೆ ಇಲ್ಲಿನ ಅಧಿಕಾರಿಗಳು ಇಲ್ಲದ ಸಬೂಬು ಹೇಳಿಕೊಂಡು ಹತ್ತು ಹದಿನೈದು ದಿನಗಳಿಂದ ರೈತರಿಂದ ಕೊಬ್ಬರಿ ಖರೀದಿಸದೆ ತೀವ್ರ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಖರೀದಿ ಪ್ರಾರಂಭಿಸದಿದ್ದರೇ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ರೈತ ಪ್ರತಿಭಟನಾಕಾರರು ಎಚ್ಚರಿಸಿದರು.
6 ಲಕ್ಷಕ್ಕೂ ಹೆಚ್ಚು ತೆಂಗಿನ ಮರ ನಾಶ: ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಕಳೆದ 7ತಿಂಗಳ ಹಿಂದೆ 19 ಸಾವಿರ ಹಾಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಈಗ 9000ಕ್ಕೆ ಇಳಿದಿದೆ. ನಫೆಡ್ ಖರೀದಿ ಕೇಂದ್ರದ ಮೂಲಕ 11,700 ರೂ.ಬೆಲೆಗೆ ಕೊಬ್ಬರಿ ಖರೀದಿಸಲಾಗುತ್ತಿದೆ. ಆದರೂ ಈ ಬೆಲೆ ಏನೇನು ಸಾಲದಾಗಿದೆ. ತಾಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಕಳೆದ ವರ್ಷ 6 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದೆ. ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿ ನಫೆಡ್ ಕೇಂದ್ರದಲ್ಲಿ ಕೊಬ್ಬರಿ ಖರೀದಿಸಲು ಚೀಲ ಇಲ್ಲ. ಸಾಗಾಣಿಕೆ ಮಾಡಲು ಲಾರಿ ಇಲ್ಲ ಎನ್ನುವ ಸಬೂಬು ಹೇಳಿಕೊಂಡು ರೈತರನ್ನು ಹತ್ತು-ಹದಿನೈದು ದಿನ ಕಾಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟ ಕೊರತೆ ಹೊರೆ: ಖಾಲಿ ಚೀಲದಿಂದ ಹಿಡಿದು ಕೊಬ್ಬರಿ ಗುಣಮಟ್ಟ ಪರೀಕ್ಷಿಸುವವರೆಗೆ ಹಾಗೂ ಲಾರಿಗೆ ಲೋಡ್ ಮಾಡುವವರೆಗೆ ಎಲ್ಲಾ ವೆಚ್ಚವನ್ನು ರೈತರೆ ನೀಡಬೇಕಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ಕೊಬ್ಬರಿಯನ್ನೆ 1 ಕ್ವಿಂಟಲ್‌ನಲ್ಲಿ 20 ಕೆ.ಜಿ ಕೊಬ್ಬರಿ ತಿರಸ್ಕರಿಸುವ ಮೂಲಕ ರೈತರಿಗೆ ನಷ್ಟ ಉಂಟುಮಾಡುತ್ತಿದ್ದಾರೆ. ನಫೆಡ್ ಅಧಿಕಾರಿಗಳನ್ನು ಗಮನಿಸುವವರಿಗೆ ಯಾವುದೇ ಗ್ರೇಡ್ ತಿರಸ್ಕಾರವಿಲ್ಲದೆ ಸಮಯ ಎಷ್ಟಾದರೂ ಕೊಬ್ಬರಿ ಖರೀದಿಸುತ್ತಾರೆ ಎಂದು ಆರೋಪಿಸಿದರು. ರೈತರ ಪ್ರತಿಭಟನೆಯಿಂದ ಎಚ್ಚೆತ್ತ ಅಧಿಕಾರಿಗಳು ಲಾರಿ ಗುತ್ತಿಗೆದಾರರು ಕರೆಸಿ ನಾಳೆಯಿಂದಲೇ ಈಗಾ ಗಲೇ ಖರೀದಿಯಾಗಿರುವ ಕೊಬ್ಬರಿ ಸಾಗಾಣಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಸಂಚಾಲಕ ಅಯ್ಯೂಬ್ ಪಾಷಾ, ಜಿಲ್ಲಾ ಕಾರ್ಯಧ್ಯಕ್ಷ ಎಜಾಜ್ ಪಾಷಾ,ಮಹಮ್ಮದ್ ದಸ್ತಗೀರ್, ವಕೀಲರಾದ ವೆಂಕಟೇಶ್, ಶಾಂತಮ್ಮ, ರಂಗಸ್ವಾಮಿ, ಹನುಮಂತು, ರಾಮಚಂದ್ರ, ಸೋಮಣ್ಣ, ಚಂದ್ರಪ್ಪ, ರಮೇಶ್, ತಿಮ್ಮಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.