ಎಚ್.ಡಿ.ಕೋಟೆ : ತಾಲೂಕಿನಲ್ಲಿ ಹಗಲು ವೇಳೆಯಲ್ಲೇ ಕಾಡುಪ್ರಾಣಿಗಳು ತಾಲೂಕು ಕೇಂದ್ರ ಸ್ಥಾನಕ್ಕೆ ಆಗಮಿಸುತ್ತಿರುವಾಗ, ವಿದ್ಯುತ್ ಸಮಸ್ಯೆ ಸರಿದೂಗಿಸಿಕೊಂಡು ರೈತರು ರಾತ್ರಿ ವೇಳೆ ಜಮೀನುಗಳಿಗೆ ನೀರಾಯಿಸುವುದು ಎಷ್ಟು ಕ್ಷೇಮ. ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಕಡೆ ಅರಣ್ಯ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಬೇಕು ಕಬ್ಬು ಬೆಳೆಗಾರರ ಸಂಘದ ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.
ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ರೈತರ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ರೈತರನ್ನು ದೇಶದ ಬೆನ್ನೆಲುಬೆಂದು ಬಿಂಬಿಸುತ್ತದೆ, ಶ್ರಮವಹಿಸಿ ದುಡಿಯುವ ಅನ್ನದಾತರ ಕೃಷಿಗೆ ಅಗತ್ಯ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಅಸಮರ್ಪಕ ವಿದ್ಯುತ್ ಸಮಸ್ಯೆ ಸರಿದೂಗಿಸಿಕೊಳ್ಳಲು ಅನ್ನದಾತರು ಅಹೋರಾತ್ರಿ ಅನ್ನುವುದನ್ನೂ ಮರೆತು ವಿದ್ಯುತ್‌ಗಾಗಿ ಹಾತೊರೆದು ರಾತ್ರಿ ವೇಳೆಯೂ ಜಮೀನುಗಳ ಪಂಪ್‌ಸೆಟ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸಬೇಕಾದ ಸ್ಥಿತಿ ಇದೆ. ತಾಲೂಕು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಅರಣ್ಯ ಪ್ರದೇಶವನ್ನು ಸುತ್ತುವರಿದಿದೆ. ಇಲ್ಲಿ ವನ್ಯಜೀವಿಗಳು ಮಾನವ ಸಂಘರ್ಷ ಸಾಮಾನ್ಯವಾಗಿದ್ದು, ಹುಲಿಗಳು ತಾಲೂಕು ಕೇಂದ್ರಕ್ಕೆ ಹಗಲಿನಲ್ಲೂ ಆಶ್ರಯ ಪಡೆದಿರುವ ನಿದರ್ಶನಗಳು ಸಾಕಷ್ಟಿವೆ. ಕಳೆದ 3 ದಿನಗಳ ಹಿಂದಿನಿಂದ ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ತಾಲೂಕಿನ ಕೆ.ಎಡತೊರೆ ಗ್ರಾಮದಲ್ಲಿ ಹಾಡಹಗಲಿನಲ್ಲೇ ಪ್ರತ್ಯಕ್ಷಗೊಂಡಿರುವ ರೈತರು ನಾಗರಿಕರಲ್ಲಿ ತಲ್ಲಣವನ್ನುಂಟು ಮಾಡಿದೆ.
ಅರಣ್ಯ ಇಲಾಖೆ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಬೇಕು. ಹೀಗಿರುವಾಗ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡದೇ ಇರುವುದರಿಂದ ರಾತ್ರಿ ವೇಳೆ ವಿದ್ಯುತ್ ಬಳಕೆಯಿಂದ ಪಂಪ್‌ಸೆಟ್‌ಗಳ ಮೂಲಕ ಬೆಳೆಗೆ ನೀರಾಯಿಸಲು ರೈತರು ಜಮೀನುಗಳಿಗೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಹುಲಿ ರೈತರ ಜೀವಕ್ಕೆ ಹಾನಿ ಮಾಡಿದರೆ ಹೊಣೆ ಯಾರು. ಇದನ್ನು ಮನಗಂಡು ಸರ್ಕಾರ ರೈತರಿಗೆ ಸಮಪರ್ಕ ವಿದ್ಯುತ್ ಸರಬರಾಜು ಮಾಡಲು ಕ್ರಮವಹಿಸಬೇಕು. ಕಬ್ಬಿಗೆ 150ರೂ ಹೆಚ್ಚಿನ ಹಣ ಕೊಡಿಸಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಕಬ್ಬು ಕಟಾವಿಗೆ 18ತಿಂಗಳು ದಿನ ನಿಗದಿ ಪಡಿಸಿ ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ಇಳುವರಿಯಲ್ಲಿ ತೀವ್ರ ನಷ್ಟವಾಗುತ್ತಿದೆ. ಕೂಡಲೆ ಜಿಲ್ಲಾಡಳಿತ ಸಕ್ಕರೆ ಕಾರ್ಖಾನೆಗಳಿಗೆ ಕಠಿಣ ಸೂಚನೆ ನೀಡಿ ಸಕಾಲದಲ್ಲಿ ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳುವಂತೆ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯದರ್ಶಿ ಹತ್ತಳ್ಳಿ ದೇವರಾಜು ಮಾತನಾಡಿ, ರೈತರ ಸಂಘಟಿತ ನಿರಂತರ ಹೋರಾಟದ ಪಲವಾಗಿ ಸರ್ಕಾರ ಕಬ್ಬಿಗೆ 150 ರೂ. ಬೆಲೆ ಏರಿಕೆ ಮಾಡಿದೆ. ಆದರೆ ರೈತರ ಹೋರಾಟಕ್ಕೆ ಯಾವ ಜನಪ್ರತಿನಿಧಿಗಳೂ ಬೆಂಬಲಿಸದೇ ಇದ್ದದ್ದು ದುರ್ದೈವ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪಕ್ಷಗಳ ಬಾವುಟ ದೂರ ಇರಿಸಿ ರೈತ ಸಂಘದ ಶಾಲು ಹಾಕಿಕೊಂಡು ನಾಟಕ ಆರಂಭಿಸಿದ್ದಾರೆ. ರೈತರು ಎಚ್ಚರದಿಂದಿರಬೇಕು ಎಂದರು. ತಾಲೂಕು ಅಧ್ಯಕ್ಷರಾಗಿ ಹಂಪಾಪುರ ರಾಜೇಶ್, ಪ್ರದಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.