Advertisement

ಮೈಸೂರಲ್ಲಿ ಸೊಪ್ಪು ಕಟ್ಟಿಕೊಂಡು ರೈತರಿಂದ ಪ್ರತಿಭಟನೆ

04:07 PM Nov 05, 2022 | Team Udayavani |

ಮೈಸೂರು: ಕಬ್ಬಿನ ಎಫ್ಆರ್‌ಪಿ ಪುನರ್‌ ಪರಿಶೀಲನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಸೊಪ್ಪುಕಟ್ಟಿಕೊಂಡು ಆದಿವಾಸಿಗಳ ವೇಷದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಾಡು ಜನರ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ನಮ್ಮನ್ನು ಏಕೆ ತಡೆಯುತ್ತಿದ್ದೀರಿ? ನಮ್ಮ ಸಮಸ್ಯೆ ಪರಿಹರಿಸದೆ ಕಾಡು ಜನರಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಇಲ್ಲ. ಬೇರೊಂದು ಸಭೆಗೆ ಹೋಗಿದ್ದಾರೆ. ಅವರು, ಬಂದ ತಕ್ಷಣ ಕರೆತರುವುದಾಗಿ ಮನವೊಲಿಸಿದರು. ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳ ಮಾಹಿತಿಗೆ ಸೊಪ್ಪು ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ .ಟಿ.ಸೋಮಶೇಖರ್‌ ರೈತರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ರಾಜ್ಯದಲ್ಲಿ ಟನ್‌ ಕಬ್ಬಿಗೆ ಎಫ್ಆರ್‌ಪಿ ದರ 3050ಕ್ಕೆ ನಿಗದಿಗೊಳಿಸಲಾಗಿದೆ. ಆದರೆ ಇತರೆ ರಾಜ್ಯಗಳು 3500 ರಿಂದ 3800ಕ್ಕೂ ಹೆಚ್ಚು ದರ ನೀಡುತ್ತಿರುವಾಗ ರಾಜ್ಯ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ. ಕಡಿಮೆ ದರ ನಿಗದಿಯಿಂದ ರಾಜ್ಯದ 30 ಲಕ್ಷಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಅತಂತ್ರರಾಗಿದ್ದಾರೆ. 40 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಕಬ್ಬು ಬೆಳೆಗಾರರಿಗಿಂತ ಸಕ್ಕರೆ ಕಾರ್ಖಾನೆಗಳ ಹಿತವೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಕಿಡಿ ಕಾರಿದರು.

ಸರ್ಕಾರದ ಆದೇಶಗಳನ್ನು ಕಾರ್ಖಾನೆಗಳು ಉಲ್ಲಂಘನೆ ಮಾಡುತ್ತಿದ್ದರೂ ಜಿಲ್ಲಾಧಿಕಾರಿ ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವ ಅಧಿಕಾರವಿದ್ದರೂ ಕ್ರಮವಹಿಸದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ತೂಕ, ಇಳುವರಿ, ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಮೋಸ ಮಾಡುತ್ತಿದ್ದು, ಇದೆಲ್ಲಾ ವಂಚನೆಗಳನ್ನು ತಪ್ಪಿಸಲು ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್‌, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್‌, ಸಂಚಾಲಕ ಕೆ.ಆರ್‌.ಎಸ್‌. ರಾಮೇಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಕಾಟೂರು ಮಹದೇವಸ್ವಾಮಿ, ಚುಂಚುರಾಯನ ಹುಂಡಿ ಮಂಜು, ನಂಜುಂಡಸ್ವಾಮಿ, ಸಿದ್ದರಾಮ, ಬಸವರಾಜಪ್ಪ, ವರಕೂಡು ನಾಗೇಶ್‌, ತೆರಣಿಮುಂಟಿ ಸುರೇಶ್‌ ಶೆಟ್ಟಿ, ಸಾತಗಳ್ಳಿ ಬಸವರಾಜ್‌, ಪಿ.ರಾಜು, ವಾಜಮಂಗಲ ಮಹದೇವು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next