ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ವಿದ್ಯುತ್ ಪ್ರಸರಣಾ ಕೇಂದ್ರದ ಲೈನ್‌ನ ಟವರ್ ನಿರ್ಮಾಣ ಮಾಡಲು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದೇ ಹೊಸದಾಗಿ ಟವರ್ ನಿರ್ಮಿಸಲು ಮುಂದಾದ ಕೇಂದ್ರದ ವಿರುದ್ಧ ಸೂಕ್ತ ಪರಿಹಾರಕ್ಕಾಗಿ ಕೆಪಿಆರ್‌ಎಸ್ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾದ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಕೆಪಿಟಿಸಿಎಲ್‌ನ ಅಧಿಕಾರಿಗಳು ಪ್ರಸರಣ ವಿಭಾಗದಿಂದ ವಿದ್ಯುತ್ ಲೈನ್ ಹಾಕಲು ರೈತರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಟವರ್ ನಿರ್ಮಿಸಿ ಲೈನ್ ಹಾಕಿದ್ದಾರೆ. ಅಲ್ಲದೆ ರೈತರ ಜಮೀನುಗಳಲ್ಲಿರುವ ಬೃಹತ್ ಮರಗಳನ್ನು ಕಠಾವು ಮಾಡಿದ್ದಾರೆ. ಇದಕ್ಕಾಗಿ ಕೇವಲ ಕಾಟಾಚಾರಕ್ಕೆ ಎಂಬದಕ್ಕೆ ಒಂದಷ್ಟು ಹಣಕೊಟ್ಟು, ವಿದ್ಯುತ್ ಲೈನ್ ಹಾದುಹೋಗುವ ಜಮೀನಿಗೆ ಕೇಂದ್ರ ಸರ್ಕಾರದ ಭೂಸ್ವಾಧೀನ ಮಾರ್ಗದರ್ಶನದಂತೆ ಪರಿಹಾರ ನೀಡುತ್ತೇವೆ ಎಂದು ಹೇಳಿ ಹೋದವರು, ಇತ್ತ ತಲೆ ಹಾಕಿಲ್ಲ. ಈಗ ಪುನಃ ವಿದ್ಯುತ್ ಮಾರ್ಗ ಎಳೆದು ಟವರ್ ನಿರ್ಮಿಸುವ ಹುನ್ನಾರ ನಡೆಸಿದ್ದು, ಸೂಕ್ತ ಪರಿಹಾರ ನೀಡಿ ಎಂದು ರೈತರು ಪ್ರತಿಭಟನೆ ನಡೆಸಿದರು. ಬಳಿಕ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ನಂತರ ಕೆ.ಪಿ.ಆರ್.ಎಸ್ ನ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಮಾತನಾಡಿ, ಸೋಮೇನಹಳ್ಳಿ ಪ್ರಸರಣ ಕೇಂದ್ರದ ಪ್ರಾರಂಭದಲ್ಲಿ ಹೊಸದಾಗಿ ವಿದ್ಯುತ್ ಲೈನ್ ಹಾಕುವಾಗ ರೈತರ ಮೇಲೆ ದೌರ್ಜನ್ಯ ನಡೆಸಿದ ವಿದ್ಯುತ್ ಕೇಂದ್ರದ ಅಧಿಕಾರಿಗಳು ಹೆಚ್ಚು ಜಮೀನು ಕಳೆದುಕೊಂಡವರಿಗೆ ಸ್ವಲ್ಪ ಹಣ ನೀಡಿ ವಂಚಿಸಿದ್ದಾರೆ. ಈಗ ಪುನಃ ರೈತರಿಗೆ ಪರಿಹಾರ ನೀಡದೆ ಜಮೀನುಗಳಲ್ಲಿ ಟವರ್ ನಿರ್ಮಿಸಲು ಮುಂದಾಗಿದ್ದು, ಇದು ರೈತರಿಗೆ ಕೆಪಿಟಿಸಿಎಲ್ ಸಂಸ್ಥೆಯ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಕೆಲವು ಜಮೀನಲ್ಲಿ ರೈತರು ಹಸು ಕುರಿ ಸಾಕಾಣಿಕೆ ಶೆಡ್ ಗಳನ್ನೂ ನಿರ್ಮಿಸಿಕೊಂಡಿದ್ದಾರೆ ಹಾಗೂ ಇಲ್ಲಿ ಬಹುತೇಕ ಅರ್ಧ ಎಕರೆ ಒಂದು ಏಕರೆ ಹೊಂದಿರುವ ಸಣ್ಣ ಹಿಡುವಳಿದಾರರಿದ್ದು, ಅವರ ಬಹತೇಕ ಭೂಮಿ ಕಳೆದುಕೊಂಡಿದ್ದಾರೆ. ವಿದ್ಯುತ್ ಲೈನ್ ಹಾದು ಹೋಗಿರುವ ಜಾಗದ ಕೆಳಗೆ ಕೃಷಿ ಅಸಾಧ್ಯ. ರೈತರ ಜಮೀನನ್ನು ಸೂಕ್ತ ಸರ್ವೆ ಮಾಡಬೇಕು, ಕೊಳವೆ ಬಾವಿ, ಶೆಡ್, ಬƒಹತ್ ಮರಗಳು ಇರುವ ಜಮೀನಿಗೆ ಇರುವ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಸಿಗ್ಬತುಲ್ಲಾ ರವರಿಗೆ ರೈತರು ಮನವಿ ಪತ್ರ ನೀಡಿ, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ರೈತ ಮತ್ತು ರೈತ ಸಂಘ ಮುಖಂಡರ ಸಭೆ ನಡೆಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ನಮಗೆ ಪರಿಹಾರ ನೀಡದೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ರೈತರು ಆಗ್ರಹಿಸಿದರು. ಕೆ.ಪಿ.ಆರ್.ಎಸ್‌ನ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್, ಮುಖಂಡರಾದ ನಾಗರಾಜ್, ಆದಿನಾರಾಯಣ ಸ್ವಾಮಿ, ಶ್ರೀನಿವಾಸ, ಗ್ರಾಪಂ ಸದಸ್ಯ ರಾದ ಗಂಗಾನಹಳ್ಳಿ ವೆಂಕಟೇಶ್, ಸೋಮೇನಹಳ್ಳಿ ಸದಸ್ಯ ವೆಂಕಟೇಶ್, ವೆಂಕಟ ನಾರಾ ಯಣಚಾರಿ, ಗಂಗರಾಜು, ರಾಮಮೂರ್ತಿ ಇದ್ದರು.