ಬಂಗಾರಪೇಟೆ: ಹತ್ತಾರು ವರ್ಷಗಳಿಂದ ಗಡಿ ಭಾಗದ ರೈತರ ಜೀವ ಹಿಂಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡಿ ಇಲ್ಲವೇ ಆನೆ ಲದ್ದಿ ಮಾರಾಟ ಮಾಡಲು ಮಾರುಕಟ್ಟೆಯ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿ ರೈತಸಂಘದಿಂದ ಆನೆ ಲದ್ದಿ ಸಮೇತ ಕಾಮಸಮುದ್ರದ ಗಾಂಧಿ ಪ್ರತಿಮೆಯೆದುರು ಹೋರಾಟ ನಡೆಸಲಾಯಿತು.
ಎ.ಎಸ್.ಐ ವೆಂಕಟೇಶ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜಾ ಸೇವಕರಾಗಬೇಕಾದ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಹಳ್ಳಿಯಲ್ಲಿ ಮತ ಪಡೆಯಲು ಕೈ ಕಾಲಿಗೆ ಬಿದ್ದು ಗೆದ್ದ ನಂತರ ಇಡೀ ದೇಶವೇ ಗೆದ್ದಂತೆ ಜನಸಾಮಾನ್ಯರ ಸಮಸ್ಯೆಗಳನ್ನು ಮರೆಯುತ್ತಿದ್ದಾರೆ. ಗಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡುವ ಜೊತೆಗೆ ಅಪ್ಪಿ ತಪ್ಪಿ ಹಳ್ಳಿಗಳಿಗೆ ಬಂದರೆ ಆನೆ ಲದ್ದಿ ತಿನ್ನಿಸುವ ಚಳುವಳಿ ಮಾಡುವ ಎಚ್ಚರಿಕೆಯನ್ನು ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಂದು ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ ಮುಖಾಂತರ ಬ್ರಿಟೀಷರನ್ನು ದೇಶದಿಂದ ತೊಲಗಿಸಿ ಭವ್ಯ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಇಂದು ಗಡಿ ಭಾಗದ ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಗಾಂಧಿ ಪ್ರತಿಮೆ ಮುಂದೆ ರೈತರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೊಂದ ರೈತ ಕದಿರಿನತ್ತ ಅಪ್ಪೋಜಿರಾವ್ ಮಾತನಾಡಿ, ಮಾರುಕಟ್ಟೆಗೆ ಬೆಳೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ರೈತರ ಬೆವರ ಹನಿಯನ್ನು ಕಸಿದುಕೊಳ್ಳುತ್ತಿದ್ದರೂ ಸಮಸ್ಯೆ ಯಾದಾಗ ಮಾತ್ರ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಅಧಿಕಾರಿಗಳಿಗೆ ಜ್ಞಾಪಕ ಬಂದು ಬಿಕ್ಷೆ ರೂಪದಲ್ಲಿ ಪರಿಹಾರ ಘೋಷಣೆ ಮಾಡಿ ಮೊಸಳೆ ಕಣ್ಣೀರು ಸುರಿಸುವ ಮೂಲಕ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗಾಂಧಿ ಜಯಂತಿಯಂದು ಗಡಿ ಭಾಗದ ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಕಣ್ತೆರೆಸಲು ಗಾಂಧಿ ಪ್ರತಿಮೆ ಮುಂದೆ ಬೆಳೆ ತಿಂದು ಭೂಮಿಯಲ್ಲಿ ಹಾಕಿರುವ ಆನೆ ಲದ್ದಿ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ಪಾರ್ಸೆಲ್ ಮಾಡುವ ಮುಖಾಂತರ ನಮ್ಮ ಬೆಳೆಗೆ ಆನೆಗಳಿಂದ ಮುಕ್ತಿ ಕೊಡಿ ಇಲ್ಲವೇ ಆನೆ ಹಿಡಿಯಲು ಆದೇಶ ಕೊಡಿ ಅದೂ ಇಲ್ಲದಿದ್ದರೆ ಕಡೆಯದಾಗಿ ಆನೆ ಲದ್ದಿ ಮಾರಾಟ ಮಾಡಲು ಗಡಿ ಭಾಗದಲ್ಲಿ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎ.ಎಸ್.ಐ ವೆಂಕಟೇಶ್, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಹಸಿರುಸೇನೆ ಜಿಲ್ಲಾಧ್ಯಕ್ಷ ಪುತ್ತೇರಿ ರಾಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ನಾಗಯ್ಯ, ವಿಶ್ವ, ಮುನಿರಾಜು, ಯಲ್ಲಣ್ಣ, ಪ್ರಭಾಕರ್, ನಾಗರಾಜ್, ಗೋವಿಂದಪ್ಪ, ಮಂಜುನಾಥ್, ಗುಲ್ಲಟ್ಟಿ, ಲಕ್ಷ್ಮಣ್ ನೊಂದ ವಕ್ಕಲೇರಿ ಹನುಮಯ್ಯ, ರೈತರು ಹಾಜರಿದ್ದರು.