ಚಾಮರಾಜನಗರ: ತಾಲೂಕಿನ ಆನೆ ಮಡುವಿನ ಕೆರೆಗೆ ನೀರು ಹರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ , ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ತಾಲೂಕಿನ ಉಡಿಗಾಲ ಗ್ರಾಮದಿಂದ ರೈತರು ಚಾಮರಾಜನಗರಕ್ಕೆ ಪಾದಯಾತ್ರೆ ನಡೆಸಿ, ಬಳಿಕ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ.
ಉಡಿಗಾಲ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದಲೂ ರೈತರು ಧರಣಿ ಸತ್ಯಾಗ್ರಹ ನಡೆ ಸುತ್ತಿದ್ದು ಮೂರನೇ ದಿನವಾದ ಮಂಗಳವಾರ ಗ್ರಾಮದಿಂದ ಜಿಲ್ಲಾಕೇಂದ್ರಕ್ಕೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ಸುಮಾರು 16 ಕಿ.ಮೀ ದೂರ ಪಾದಯಾತ್ರೆ ನಡೆಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಆಗಮಿಸಿ, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಅಂತ್ಯಗೊಳಿಸಿ, ಚುನಾವಣೆ ಬಳಿಕ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆದರೆ ಪ್ರತಿಭಟನಾಕಾರರು ಇದಕ್ಕೆ ಒಪ್ಪಲಿಲ್ಲ. ಪ್ರತಿಭಟನೆ ಮುಂದುವರೆಸಿದರು. ಸ್ಥಳದಲ್ಲೇ ಅಡುಗೆ ಮಾಡಿ, ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ರಾತ್ರಿಯೂ ಪ್ರತಿಭಟನೆ ಮುಂದುವರೆಸಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಕಬ್ಬು ಬೆಳೆಗಾರರ ಸಂಘ ದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಆನೆಮಡುವಿನ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ಹೋ ರಾಟ ಮಾಡುತ್ತಾ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಸಂಬಂಧ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ನಡೆಸಿ ಕೆರೆಗೆ ನೀರು ತುಂಬಿಸಲು ಸೂಚನೆ ನೀಡಿದ್ದರು.ಅಲ್ಲದೇ ಕೆರೆಗೆ ನೀರು ತುಂಬಿಸಲು 3 ಕೋಟಿ ಅನುದಾನವನ್ನು ಸಹ ಸರ್ಕಾರ ಬಿಡುಗಡೆ ಮಾಡಿತ್ತು. ಅದರಂತೆ ಆನೆಮಡುವಿನ ಕೆರೆಗೆ ಗುರುತ್ವಾಕರ್ಷಣೆ ಮುಖಾಂತರ ಚಿಕ್ಕ ಮೋರಿ ತಾಯಿ ಕಾಲುವೆ ಮೂಲಕ ನೀರು ಹರಿಸಲು ರೈತರ ಆಗ್ರಹವಾಗಿದೆ.
ಇದನ್ನೂ ಓದಿ : ವಿಜಯಪುರ : ಉಪಹಾರ ಸೇವಿಸಿದ ವಸತಿ ಶಾಲೆಯ 25 ಬಾಲಕಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಆದರೆ, ಅಧಿಕಾರಿಗಳು ತಮ್ಮಡಿಹಳ್ಳಿ ಕೆರೆಯಿಂದ ನೇರವಾಗಿ ಪೈಪ್‌ಲೈನ್ ಮೂಲಕ ನೀರು ಹರಿಸಲು ಮುಂದಾಗಿರುವುದು ಖಂಡನೀಯ ಎಂದರು.ಚಿಕ್ಕಮೋರಿಯ ಮೂಲಕ ನೀರು ಹರಿಸಿದರೆ ಅಂತರ್ಜಲ ಮಟ್ಟ ಸಹ ವೃದ್ಧಿಯಾಗುತ್ತದೆ. ಆದ್ದರಿಂದ ಚಿಕ್ಕಮೋರಿ ಮೂಲಕ ನೀರು ಹರಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮೂಕಳ್ಳಿ ಮಹಾದೇವಸ್ವಾಮಿ, ಉಪಾಧ್ಯಕ್ಷ ಹಾಲಿನ ನಾಗರಾಜ್, ಹಾಡ್ಯ ರವಿ, ಹೆಗ್ಗೋಠಾರ ಶಿವಸ್ವಾಮಿ, ಗೌಡಹಳ್ಳಿ ಷಡಕ್ಷರಿ, ಬರಡನಪುರ ನಾಗರಾಜು, ಕುರುಬೂರು ಸಿದ್ದೇಶ್, ಗೌರೀಶ್, ಕೆರೆಹುಂಡಿ ರಾಜಣ್ಣ ಸೇರಿದಂತೆ ಉಡಿಗಾಲ ಗ್ರಾಮ ಘಟಕದ ಪದಾಧಿಕಾರಿಗಳು ರೈತರು ಭಾಗವಹಿಸಿದ್ದರು.