ಅಕ್ಕಿಆಲೂರು: ಸಾಲ ಮರಳಿಸದ ಹಿನ್ನೆಲೆ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪಟ್ಟಣದ ಪಿಎಲ್‌ಡಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸಮೀಪದ ಇನಾಂಯಲ್ಲಾಪುರ ಗ್ರಾಮದ ರೈತ ಪುಟ್ಟಪ್ಪ ಬನ್ನಿಹಳ್ಳಿ ಐದಾರು ವರ್ಷಗಳ ಹಿಂದೆ ಪಿಎಲ್‌ಡಿ ಬ್ಯಾಂಕಿನಲ್ಲಿ ಟ್ರ್ಯಾಕ್ಟರ್ ಸಾಲ ಪಡೆದುಕೊಂಡಿದ್ದ. ನಾಲ್ಕು ಕಂತುಗಳಿಂದ ಆತ ಸುಸ್ತಿದಾರನಾಗಿದ್ದರಿಂದ ಬ್ಯಾಂಕಿನ ಅಧಿಕಾರಿಗಳು ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದರು. ಇದನ್ನು ಖಂಡಿಸಿ ರೈತ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ರೈತರು ಕೆಲಕಾಲ ಬ್ಯಾಂಕಿನ ಅಧಿಕಾರಿಗಳೊಡನೆ ವಾಗ್ವಾದ ನಡೆಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಕೃಷಿ ಚಟುವಟಿಕೆಗಳ ಮೇಲಿನ ಎಲ್ಲ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿ, ಪಿಎಲ್‌ಡಿ ಬ್ಯಾಂಕುಗಳ ಸಾಲಮನ್ನಾ ಮಾಡುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಾಲಮನ್ನಾ ನೀತಿಯನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಮಳೆ-ಬೆಳೆ ಇಲ್ಲದೇ ಪರದಾಡುತ್ತಿರುವ ರೈತ ಸಮುದಾಯ ಬ್ಯಾಂಕುಗಳ ದೈತ್ಯ ಬಡ್ಡಿ ಆಕರಣೆಯ ಕೂಪಕ್ಕೆ ಸಿಲುಕಿ ಹೊಲ-ಮನೆ ಮಾರಿಕೊಳ್ಳುವ ಸ್ಥಿತಿಗೆ ಬಂದು ತಲುಪುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಎಂ.ಎಂ.ಸೊಪ್ಪಣ್ಣವರ, ರಾಜ್ಯ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ವಸೂಲಿ ಮಾಡಲು ಆದೇಶವಿದೆ. ನಿಯಮದಂತೆ ನಾವು ನಮ್ಮ ಕರ್ತವ್ಯ ಮಾಡಬೇಕಿದೆ. ಈ ಕುರಿತು ರೈತರೊಂದಿಗೆ ಸಮಾಲೋಚಿಸಿ ಜಪ್ತಿ ಮಾಡಿದ ಟ್ರ್ಯಾಕ್ಟರನ್ನು ಕೇಂದ್ರ ಕಚೇರಿಯ ಅಧಿಕಾರಿಗಳ ಅನುಮತಿ ಪಡೆದು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಉಪಾಧ್ಯಕ್ಷ ಮಹೇಶ ವಿರುಪಣ್ಣನವರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಮಲ್ಲನಗೌಡ ಪಾಟೀಲ, ಸಿದ್ಧಲಿಂಗೇಶ ಸಿಂಧೂರ, ಚನ್ನಪ್ಪ ಪಾವಲಿ, ಅಜ್ಜನಗೌಡ ಪಾಟೀಲ, ಷಣ್ಮುಖಪ್ಪ ಅಂದಲಗಿ, ಚನ್ನಬಸನಗೌಡ ಬನ್ನಿಹಳ್ಳಿ, ಕೊಟ್ರಪ್ಪ ಶೆಟ್ಟರ, ರಾಜು ಯಮಕನಮರಡಿ, ಕಾರ್ತಿಕ ಪಸಾರದ ಸೇರಿದಂತೆ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.