Advertisement

‌ಪ್ರತಿಭಟನೆಗೆ ಎನ್‌ಐಎ ಬಿಸಿ

01:48 AM Jan 18, 2021 | Team Udayavani |

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ನಡುವೆಯೇ ಪಂಜಾಬ್‌ ರೈತ ನಾಯಕ ಬಲದೇವ್‌ ಸಿಂಗ್‌ ಸಿರ್ಸಾ, ಪಂಜಾಬಿ ನಟ ದೀಪ್‌ ಸಿಧು ಸಹಿತ ಸುಮಾರು 40 ಮಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಮನ್ಸ್‌ ಜಾರಿ ಮಾಡಿದೆ. ಅಮೆರಿಕ ಮೂಲದ ಖಲಿಸ್ಥಾನ ಪರ ನಿಷೇಧಿತ ಸಂಘಟನೆ ಸಿಕ್ಖ್ ಫಾರ್‌ ಜಸ್ಟೀಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Advertisement

ಎನ್‌ಐಎ ಸಮನ್ಸ್‌ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನವಿದು ಎಂಬ ಆರೋ ಪವೂ ಕೇಳಿಬಂದಿದೆ. ಪ್ರತಿಭಟನೆಯಲ್ಲಿ ಖಲಿಸ್ಥಾನ ಪರ ದೇಶವಿರೋಧಿ ಶಕ್ತಿಗಳು ಭಾಗಿಯಾಗಿವೆ ಎಂದು ಇತ್ತೀಚೆಗೆ ಬಿಜೆಪಿಯ ಹಲವು ನಾಯಕರು ಆರೋಪಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ನಟ ದೀಪ್‌ ಸಿಧು ಅವರಿಗೆ ರವಿವಾರವೇ ಉಗ್ರ ನಿಗ್ರಹ ಸಂಸ್ಥೆಯ ಮುಂದೆ ಹಾಜರಾಗುವಂತೆ ಸೂಚಿಸಲಾ ಗಿದೆ. ಇವರಲ್ಲದೇ ಲಾಭದ ಉದ್ದೇಶವಿಲ್ಲದ ಸಂಸ್ಥೆ ಖಲ್ಸಾ ಏಡ್‌ನ‌ ಕೆಲವು ಅಧಿಕಾರಿಗಳಿಗೂ ಸಮನ್ಸ್‌ ಜಾರಿ ಮಾಡಲಾಗಿದೆ. ಪ್ರತಿಭಟನಕಾರ ರೈತರಿಗೆ ಅತ್ಯವಶ್ಯಕ ವಸ್ತುಗಳನ್ನು ಒದಗಿಸುತ್ತಿರುವ ಖಲ್ಸಾ ಏಡ್‌ ಸಂಸ್ಥೆ, ಎನ್‌ಐಎ ತನಿಖೆಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದೆ.

ಬಾದಲ್‌ ಕಿಡಿ: ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿ ಯಿ ಸಿ ರುವ ಶಿರೋಮಣಿ ಅಕಾಲಿ ದಳದ ನಾಯಕ ಸುಖ್‌ಬೀರ್‌ ಸಿಂಗ್‌ ಬಾದಲ್‌, ಪ್ರತಿಭಟಿಸುತ್ತಿರುವ ರೈತರು ದೇಶವಿರೋಧಿಗಳಲ್ಲ. 9ನೇ ಸುತ್ತಿನ ಮಾತುಕತೆಯೂ ವಿಫ‌ಲವಾದ ಕಾರಣ, ರೈತರ ವರ್ಚಸ್ಸಿಗೆ ಮಸಿ ಬಳಿಯಲು ಸರಕಾರ ಈ ಕುತಂತ್ರ ನಡೆಸಿದೆ ಎಂದು ಕಿಡಿಕಾರಿದ್ದಾರೆ.

2024ರ ಮೇವರೆಗೂ ಪ್ರತಿಭಟನೆಗೆ ಸಿದ್ಧ: ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು “ಸೈದ್ಧಾಂತಿಕ ಕ್ರಾಂತಿ’ಯಾಗಿದ್ದು, ಕೇಂದ್ರ ಸರಕಾರದ ಈ ಮೂರೂ ಕೃಷಿ ಕಾಯ್ದೆಗಳ ವಿರುದ್ಧ ನಾವು 2024ರ ಮೇ ತಿಂಗಳ ವರೆಗೂ ಪ್ರತಿಭಟನೆ ನಡೆಸಲು ಸಿದ್ಧರಾಗಿ ದ್ದೇವೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌(ಬಿಕೆಯು) ನಾಯಕ ರಾಕೇಶ್‌ ಟಿಕಾಯತ್‌ ರವಿವಾರ ಹೇಳಿದ್ದಾರೆ. ಕಾಯ್ದೆ ವಾಪಸ್‌ ಪಡೆಯುವುದಿಲ್ಲ ಎಂದು ಕೇಂದ್ರ ಸರಕಾರ ಪಟ್ಟು ಹಿಡಿದು ಕುಳಿತಿದೆ. ಇನ್ನೊಂದೆಡೆ ಸುಪ್ರೀಂ ಸೂಚನೆ ನಡುವೆಯೂ ಜ.26ರಂದು ಟ್ರ್ಯಾಕ್ಟರ್‌ ಪರೇಡ್‌ ಮಾಡಿಯೇ ಸಿದ್ಧ ಎಂದು ರೈತ ಒಕ್ಕೂಟಗಳು ಶಪಥ ಮಾಡಿವೆ.

Advertisement

ಕಾಯ್ದೆ ವಾಪಸ್‌ ವಿಚಾರ ಬಿಟ್ಟು ಬೇರೇನಾದರೂ ಕೇಳಿ :

ದೇಶದ ಬಹುತೇಕ ರೈತರು ಕೃಷಿ ಕಾಯ್ದೆಗಳ ಪರವಾ ಗಿಯೇ ಇದ್ದಾರೆ. ಮಂಗಳವಾರ ಪ್ರತಿಭಟನಕಾರ ರೈತರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದ್ದು, ಕಾಯ್ದೆಗಳ ಪ್ರತಿಯೊಂದು ಅಂಶಗ ಳನ್ನೂ ಚರ್ಚಿಸಲಾಗು ವುದು. ಕಾಯ್ದೆಗಳನ್ನು ವಾಪಸ್‌ ಪಡೆಯುವ ವಿಚಾರವೊಂದನ್ನು ಬಿಟ್ಟು ಬೇರೆ ಯಾವುದನ್ನಾ ದರೂ ರೈತರು ಕೇಳಲಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ರವಿವಾರ ಹೇಳಿದ್ದಾರೆ. ಈ ಮೂಲಕ ಕಾಯ್ದೆ ವಾಪಸ್‌ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ :

ಕೃಷಿ ಕಾಯ್ದೆಗಳು ಹಾಗೂ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ. ಬಿಕ್ಕಟ್ಟು ಪರಿಹಾರಕ್ಕಾಗಿ ರಚಿಸಿದ್ದ ತಜ್ಞರ ಸಮಿತಿ ಯಿಂದ ಭೂಪಿಂದರ್‌ ಸಿಂಗ್‌ ಮನ್‌ ಅವರು ಹೊರನಡೆದಿರುವ ವಿಚಾರದ ಕುರಿತೂ ಈ ವೇಳೆ ಪ್ರಸ್ತಾವ‌ವಾಗಲಿದೆ. ಜತೆಗೆ ಜ.26ರಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ್ಯಾಲಿಗೆ ತಡೆಯೊಡ್ಡುವಂತೆ ಕೇಂದ್ರ ಸರಕಾರವು ದಿಲ್ಲಿ ಪೊಲೀಸರ ಮೂಲಕ ಸಲ್ಲಿಸಿರುವ ಅರ್ಜಿಯನ್ನೂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಸಮಿತಿಯ ಮೊದಲ ಸಭೆ ನಾಳೆ :

ಕೃಷಿ ಕಾಯ್ದೆಯ ಬಿಕ್ಕಟ್ಟು ಪರಿಹರಿಸಲು ಸುಪ್ರೀಂನಿಂದ ನೇಮಕಗೊಂಡಿರುವ ತಜ್ಞರ ಸಮಿತಿಯ ಮೊದಲ ಸಭೆ ಮಂಗಳವಾರ ನಡೆಯಲಿದೆ. ಹೊಸದಿಲ್ಲಿಯ ಪೂಸಾ ಕ್ಯಾಂಪಸ್‌ನಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಸುಪ್ರೀಂ ಕೋರ್ಟ್‌ ಸಮಿತಿಗೆ ಹೊಸ ಸದಸ್ಯನನ್ನು ನೇಮಕ ಮಾಡದಿದ್ದರೆ ಈಗಿರುವ ಸದಸ್ಯರೇ ಮುಂದುವರಿ ಯುತ್ತೇವೆ ಎಂದು ಸದಸ್ಯರಲ್ಲಿ ಒಬ್ಬರಾದ ಅನಿಲ್‌ ಘನ್ವತ್‌ ಹೇಳಿದ್ದಾರೆ. ಜ.11ರಂದು ಸುಪ್ರೀಂ ಕೋರ್ಟ್‌ ನಾಲ್ವರು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಆ ಪೈಕಿ ಭೂಪಿಂದರ್‌ ಸಿಂಗ್‌ ಮನ್‌ ಅವರು, “ರೈತರ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿ ಸಮಿತಿಯಿಂದ ಹೊರನಡೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next