ಮೈಸೂರು: ಕಡಿಮೆ ಬೆಲೆಗೆ ರೈತರ ಜಮೀನು ಪಡೆದು, ಸಂತ್ರಸ್ತರ ಮನೆಯವರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ ಸ್ಥಳೀಯವಾಗಿ ಕೆಲಸ ನೀಡದೆ, ಬೇರೆ ಕಡೆ ಉದ್ಯೋಗ ನೀಡಿರುವುದನ್ನು ವಿರೋಧಿಸಿ ರೈತ ಸಂಘಟನೆಯ ನೇತೃತ್ವದಲ್ಲಿ ರೈತರುಪ್ರತಿಭಟನೆ ನಡೆಸಲಾಯಿತು.
ಅತ್ಯಂತ ಕಡಿಮೆ ಬೆಲೆಗೆ ಹಿಮ್ಮಾವು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಏಷಿಯನ್ ಪೇಂಟ್ಸ್ ಕಾರ್ಖಾನೆಗಾಗಿ ಜಮೀನನ್ನು ಬಿಟ್ಟುಕೊಟ್ಟಿದ್ದು, ಇದಕ್ಕೆ ಪ್ರತಿಯಾಗಿ ಕಾರ್ಖಾನೆಯ ಆಡಳಿತ ಮಂಡಳಿಕಾಯಂ ಉದ್ಯೋಗವನ್ನು ಇಲ್ಲಿಯೇ ನೀಡುವುದಾಗಿ ಹೇಳಿತ್ತು. ಅದರಂತೆ 94 ಭೂಸಂತ್ರಸ್ತ ಕುಟುಂಬಗಳ ಪೈಕಿ ಮೊದಲ ಹಂತದಲ್ಲಿ 53 ಮಂದಿಗೆ ಕೆಲಸ ನೀಡಲಾಗಿದೆ. ಎರಡನೇ ಹಂತದಲ್ಲಿ 8 ಮಂದಿಗೆ ಕೆಲಸ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಇದುವರೆಗೂ ಉದ್ಯೋಗ ನೀಡಿಲ್ಲ ಎಂದು ರೈತರು ಆರೋಪಿಸಿದರು.
ಮೊದಲ ಹಂತದಲ್ಲಿ ಕೆಲಸವನ್ನು ನೀಡಲಾಗಿರುವ 53 ಮಂದಿಗೆ ಮೈಸೂರಿನ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ. ಪ್ರಸ್ತುತ ತರಬೇತಿ ಮುಗಿಸಿರುವವರಿಗೆ ಬೆಳಗೊಳದ ಘಟಕಕ್ಕೆ ನಿಯೋಜಿಸಲಾಗಿದೆ. ಕಂಪನಿಯ ಈ ನಡೆ ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದು ರೈತ ಸಂಘಟನೆಯ ಮುಖಂಡರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಿಮ್ಮಾವು ಸೇರಿದಂತೆ ತಾಂಡ್ಯ ನಂಜನಗೂಡು ಇತ್ಯಾದಿ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಾಪಿಸಲಾದ ಎಲ್ಲಾ ಕೈಗಾರಿಕೆಗಳು ಸಹ ಇಲ್ಲಿನ ಘಟಕಗಳಲ್ಲಿಯೇ ತಮ್ಮ ಕಾರ್ಖಾನೆಯ ಭೂ ಸಂತ್ರಸ್ತರಿಗೆ ಕಾಯಂ ಉದ್ಯೋಗಗಳನ್ನು ನೀಡಿದೆ. ಭೂಮಿ ಕಳೆದುಕೊಂಡ ಜಾಗದಲ್ಲಿ ಕಾಯಂ ಉದ್ಯೋಗವನ್ನು ನೀಡಿವೆ. ಕಂಪನಿ ನಡೆಸಿದ ವಿವಿಧ ಸಭೆಗಳಲ್ಲಿ ಕೆಲಸವನ್ನು ಇಲ್ಲಿಯೇ ನೀಡುವುದಾಗಿ ಹೇಳಿತ್ತು. ಆದರೆ, ಬೆಳಗೊಳದ ಘಟಕದಲ್ಲಿ ಕೊಡುತ್ತಿರುವುದು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು. ಸ್ಥಳೀಯರಿಗೆ ಇಲ್ಲಿಯೇ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.
ಯಾವುದೇ ಅಂಶಗಳನ್ನು ಪರಿಗಣಿಸದೇ ಕಂಪನಿಯು ಬೆಳಗೊಳದಲ್ಲಿ ಕೆಲಸ ಮಾಡಲು ಸೂಚಿಸಿರುವುದು ಉದ್ಯೋಗವನ್ನು ತಪ್ಪಿಸುವ ಪ್ರಯತ್ನವಾಗಿದೆ. ಕಂಪನಿಯು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರವನ್ನುಕೈಬಿಡಬೇಕು. ಬೇರೆಕಡೆಕೆಲಸ ಮಾಡಲು ಸಿದ್ಧರಿಲ್ಲ. ನಮ್ಮಗೆ ಇಲ್ಲಿಯೇ ಕೆಲಸವನ್ನು ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ರೈತರು ಎಚ್ಚರಿಸಿದರು.
ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಶ್ರೀಧರ್, ನಾಗರಾಜು, ಮಹದೇವಸ್ವಾಮಿ, ರಮೇಶ್ ಸೇರಿದಂತೆ ಹಲವರು ರೈತರು ಪಾಲ್ಗೊಂಡಿದ್ದರು.