Advertisement

ಮೋಸ ಹೋದ ರೈತನಿಗೆ ಪರಿಹಾರ ನೀಡಿ

06:59 AM Jun 23, 2020 | Suhan S |

ಬ್ಯಾಡಗಿ: ಕಳಪೆ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಿ ಮೋಸಹೋದ ರೈತನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಕಾರ್ಯಕರ್ತರು ಸಂತ್ರಸ್ತ ರೈತನೊಂದಿಗೆ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಈಗಾಗಲೇ ತಾಲೂಕಿನಲ್ಲಿ ಕಳಪೆ ಬೀಜ ಬಿತ್ತನೆ ಮಾಡಿ ಮೋಸಹೋದ ರೈತರು ನೂರೆಂಟು. ಎಲೆಕೋಸು, ಗೋವಿನಜೋಳ, ಬದನೆಕಾಯಿ ಈಗ ಮೆಣಸಿನಕಾಯಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದಾಗಿ ಆರೋಪಿಸಿದರು.

ತಾಲೂಕಿನ ಕೆಂಗೊಂಡ ಗ್ರಾಮದ ರೈತ ಫಕ್ಕೀರಪ್ಪ ನೀಲಪ್ಪ ಹರಮಗಟ್ಟಿ ಎಂಬ ರೈತ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ನವಭಾರತ ಸೀಡ್ಸ್‌ ಕಂಪನಿಯ ಮೆಣಸಿನಕಾಯಿ ಬೀಜವನ್ನು ಬಿತ್ತನೆ ಮಾಡಿ 3 ತಿಂಗಳು ಗತಿಸಿದರೂ ಮೆಣಸಿನಕಾಯಿ ಒಂದಿಂಚು ಮಾತ್ರ ಬೆಳೆದಿದೆ. ಇದು ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ ಎಂದರು.

ಮಲ್ಲೇಶಪ್ಪ ಡಂಬಳ ಮಾತನಾಡಿ, ಲಾಭ ಬರದಿದ್ದರೂ ಸರಿ ಖರ್ಚು ಮಾಡಿದ ಹಣವೂ ಬರದಂತಹ ಪರಿಸ್ಥಿತಿ ಇದೆ. ಎರಡು ದಿನಗಳಲ್ಲಿ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ತೋಟಗಾರಿಕೆ ಕಚೇರಿ ಎದುರು ಎತ್ತಿನ ಗಾಡಿ ಮತ್ತು ಕುಟುಂಬ ಸಮೇತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಮೌನೇಶ ಕಮ್ಮಾರ ಮಾತನಾಡಿದರು. ಮೌನೇಶ ಕಮ್ಮಾರ, ನಂಜುಂಡಸ್ವಾಮಿ ಹಾವೇರಿ, ಈರಪ್ಪ ಕುರಡಮ್ಮನವರ, ರವಿಶಂಕರ ಮಲ್ಲಾಡದ, ನಾಗಪ್ಪ ಕಾರಗಿ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next