ದೇವರಹಿಪ್ಪರಗಿ: ದೇವರಹಿಪ್ಪರಗಿ ರೈತ ಸಂಪರ್ಕದಲ್ಲಿ ಕೇಂದ್ರದಲ್ಲಿ ತೊಗರಿ ಬೀಜದ ಕೊರತೆ ಹಿನ್ನೆಲೆ ರೈತರು ಸೋಮವಾರ ಕೃಷಿ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಬಸವರಾಜ ಕಲ್ಲೂರ ಮಾತನಾಡಿ, ಕಳೆದ ಎರಡು ದಿನದಿಂದ ತೊಗರಿ ಬೀಜ ಪಡೆಯಲು ಸರದಿಯಲ್ಲಿ ನಿಂತು ಚೀಟಿ ಪಡೆದಿದ್ದೇವೆ. ಇಂದು ನಸುಕಿನ ಜಾವದಿಂದ ತೊಗರಿ ಬೀಜ ಪಡೆಯಲು ಚೀಟಿ ತೆಗೆದುಕೊಂಡು ಬಂದ ಕೆಲವು ರೈತರಿಗೆ ಮಧ್ಯಾಹ್ನದವರೆಗೆ ಮಾತ್ರ ತೊಗರಿ ಬೀಜ ಕೊಟ್ಟಿದ್ದಾರೆ. ಇನ್ನುಳಿದ ಸರದಿಯಲ್ಲಿ ನಿಂತ ಬಹುತೇಕ ರೈತರಿಗೆ ಬೀಜ ಖಾಲಿ ಆಗಿವೆ. ಬೀಜ ಬಂದ ತಕ್ಷಣ ಕೊಡುತ್ತೆವೆ ಎಂಬ ಉಡಾಫೆ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರೈತರಿಗೆ ಬೇಕಾದಷ್ಟು ಬೀಜ ಪೂರೈಕೆ ಮಾಡದೆ ಅಧಿಕಾರಿಗಳು ತೊಗರಿ ಬೀಜ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಕೊಡುತ್ತಿದ್ದಾರೆ. ಸಾಮಾನ್ಯ ಬಡ ರೈತರಿಗೆ ಸಮರ್ಪಕವಾದ ಬೀಜ ಕೊಡುತ್ತಿಲ್ಲ. ತಾಲೂಕಿನಲ್ಲಿ ಎಲ್ಲ ರೈತರಿಗೆ ಸರಿಯಾದ ಸಮಯಕ್ಕೆ ಬೀಜ ಪೂರೈಕೆ ಮಾಡದೆ ಅಧಿ ಕಾರಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಅಧಿಕಾರಿಗಳ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಪಿಎಸೈ ಸುರೇಶ ಗಡ್ಡಿ ಆಗಮಿಸಿ ಬೀಜ ಬಂದ ನಂತರ ಪ್ರತಿಯೊಬ್ಬ ರೈತರಿಗೆ ಬೀಜ ದೊರಕಿಸುವ ಕೆಲಸ ನಾನೇ ಮುಂದು ನಿಂತು ಮಾಡುತ್ತೇನೆ. ಈಗ ಉಳಿದ ಬೀಜಗಳು ತೆಗೆಕೊಂಡು ಹೋಗಿ ಎಂದು ರೈತರ ಮನವೋಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಅಜೀಜ್ ಎಲಗಾರ, ರೈತರಾದ ಪ್ರಭು ಕಬಾಡಗಿ, ಜವಾಹಾರ ದೇಶಪಾಂಡೆ, ಶ್ರೀಶೈಲ್ ಹದರಿ, ಶರಣಪ್ಪ ತಳವಾರ, ಸಿದ್ದು ಬಿರಾದಾರ, ಬಸವರಾಜ ಮನಗೂಳಿ, ಶರಣಗೌಡ ಸುರಗಳ್ಳಿ, ಶ್ರೀಶೈಲ ಮಠಪತಿ, ಮಲ್ಲು ಬಿರಾದಾರ ಸೇರಿದಂತೆ ನೂರಾರು ರೈತರು ಇದ್ದರು.
ದೇವರಹಿಪ್ಪರಗಿ ತಾಲೂಕಿನ ರೈತರಿಗೆ ಕೊರತೆ ಆಗಬಾರದು ಎಂಬ ಉದ್ದೇಶದಿಂದ 940 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರಲ್ಲಿ 250 ಕ್ವಿಂಟಲ್ ಮಾತ್ರ ಬಂದಿದ್ದು ರೈತರಿಗೆ ವಿತರಿಸಲಾಗಿದೆ. ಮಂಗಳವಾರ ಬೆಳಗ್ಗೆ 60 ಕ್ವಿಂಟಲ್ ತೊಗರಿ ಬೀಜ ಬರಲಿದ್ದು ಅದನ್ನೂ ವಿತರಿಸುತ್ತೇವೆ. ತಾಲೂಕಿನ ಯಾವ ರೈತರಿಗೂ ಬೀಜದ ಕೊರತೆಯಾಗದಂತೆ ನೊಡಿಕೊಳ್ಳುತ್ತೇವೆ.
-ಸೋಮನಗೌಡ ಬಿರಾದಾರ, ಕೃಷಿ ಅಧಿಕಾರಿ, ದೇವರಹಿಪ್ಪರಗಿ