ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಸಣ್ಣ ವರ್ಗದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಎರಡು ಸಾವಿರ ರೂ.ನಂತೆ ವರ್ಷಕ್ಕೆ ಆರು ಸಾವಿರ ರೂ. ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಲಾಗಿದೆ. ಆದರೆ, ರಾಜ್ಯದಲ್ಲಿ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಘೋಷಿಸಿದ್ದ ‘ರೈತ ಬೆಳಕು’ ಇನ್ನೂ ಜಾರಿಯೇ ಆಗಿಲ್ಲ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹೊಸದಾಗಿ ಬಜೆಟ್ ಮಂಡಿಸಿದ ಎಚ್.ಡಿ.ಕುಮಾರಸ್ವಾಮಿ, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಎಲ್ಲ ಯೋಜನೆ ಮುಂದುವರಿಸಲಾಗುವುದು ಎಂದು ಹೇಳಿದ್ದರು. ಆದರೆ, ಎಂಟು ತಿಂಗಳಾದರೂ ರೈತ ಬೆಳಕು ಯೋಜನೆ ಏನಾಯ್ತು ಎಂಬ ಮಾಹಿತಿಯೇ ಇಲ್ಲ.
ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ಉದ್ದೇಶದಿಂದ ‘ರೈತ ಬೆಳಕು’ ಯೋಜನೆ ಘೋಷಿಸಲಾಗಿತ್ತು. ಅದರಡಿ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿವರ್ಷ ಗರಿಷ್ಠ 10 ಸಾವಿರ ರೂ. ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್‌ಗೆ 5 ಸಾವಿರ ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು. 70 ಲಕ್ಷ ರೈತರು ಇದರ ಪ್ರಯೋಜನ ಪಡೆಯುವ ಅಂದಾಜು ಮಾಡಲಾಗಿತ್ತು.
ರೈತರ ಬೆಳಕು ಯೋಜನೆ ಜಾರಿಯಾಗದ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಈ ಯೋಜನೆ ಜಾರಿಯಾಗಿದ್ದರೆ ಕರ್ನಾಟಕದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನಕಲು ಮಾಡಿದ್ದಾರೆಂದು ಬಿಜೆಪಿಯವರಿಗೆ ತಿರುಗೇಟು ನೀಡಬಹುದಿತ್ತು. ಇದೀಗ ನಮ್ಮದೇ ಸರ್ಕಾರದ ಯೋಜನೆಯ ನಕಲು ಎಂದು ನಾವು ಹೇಳಿದರೆ, ಬಿಜೆಪಿಯವರು ‘ನೀವು ಅನುಷ್ಠಾನ ಮಾಡಿದ್ದೀರಾ’ ಎಂದು ಕೇಳುತ್ತಾರೆ. ನಾವೂ ಭಾಗಿಯಾಗಿರುವ ಸಮ್ಮಿಶ್ರ ಸರ್ಕಾರ ಇದ್ದರೂ ರೈತ ಬೆಳಕು ಯೋಜನೆ ಜಾರಿ ಮಾಡದಿರುವುದು ಬೇಸರದ ಸಂಗತಿ ಎಂಬ ಮಾತುಗಳು ಕೇಳಿಬರುತ್ತಿವೆ.
ಯಾವುದೇ ಸಮಯದಲ್ಲಿ ಜಾರಿ
‘ರೈತ ಬೆಳಕು ಯೋಜನೆ ರದ್ದಾಗಿಲ್ಲ. ಸಿದ್ದರಾಮಯ್ಯ ಅವರು 2018-19 ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳು ಮುಂದುವರಿಸಲಾಗಿರುವುದರಿಂದ ಅಧಿಕೃತವಾಗಿ ಪ್ರಸ್ತಾವನೆ ರೂಪದಲ್ಲಿ ಹಣಕಾಸು ಇಲಾಖೆ ತಲುಪಿ ಹಣ ಬಿಡುಗಡೆ, ಫಲಾನುಭವಿಗಳ ಆಯ್ಕೆಯಾಗಬೇಕು. ಆ ಪ್ರಕ್ರಿಯೆ ಇನ್ನೂ ಆಗಿಲ್ಲ. ಸಿದ್ದರಾಮಯ್ಯ ಅವರು 3500 ಕೋಟಿ ರೂ. ನಿಗದಿ ಮಾಡಿದ್ದರು. ಹೀಗಾಗಿ, ಯೋಜನೆಯನ್ನು ಯಾವುದೇ ಸಮಯದಲ್ಲೂ ಜಾರಿ ಮಾಡಬಹುದಾಗಿದೆ’ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.