ಮದ್ದೂರು: ರೈತರಿಂದ ಸಮರ್ಪಕವಾಗಿ ರಾಗಿ ಖರೀದಿ ಮಾಡದ ಅಧಿಕಾರಿಗಳವಿರುದ್ಧ ವಿವಿಧ ಗ್ರಾಮಗಳ ರೈತರು ಎರಡುಗಂಟೆಗೂ ಹೆಚ್ಚು ಕಾಲ ಮದ್ದೂರು-ಕೊಪ್ಪ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಚಾಮನಹಳ್ಳಿ ಗ್ರಾಮದ ಗೋದಾಮಿನ ಬಳಿ ತೆರೆದಿರುವ ರಾಗಿ ಖರೀದಿ ಕೇಂದ್ರದ ಬಳಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರಾಗಿ ಬೆಳೆಗಾರರು,ಜಿಲ್ಲಾ ಹಾಗೂ ತಾಲೂಕು ಆಡಳಿತ, ಆಹಾರಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ: ತಾಲೂಕಿನ ನವಿಲೆ, ಕೊಪ್ಪ, ಕೆಸ್ತೂರು, ಬೆಸಗರಹಳ್ಳಿ, ಕೆ.ಹೊನ್ನಲಗೆರೆ, ಮಲ್ಲನಕುಪ್ಪೆ ಇತರೆ ಗ್ರಾಮಗಳಿಂದ ರಾಗಿ ಮಾರಾಟಕ್ಕೆಂದು ಆಗಮಿಸಿದ್ದ ರೈತರಿಗೆ ಅಧಿಕಾರಿಗಳು, ಸ್ಪಂದಿಸದ ಹಿನ್ನೆಲೆಯಲ್ಲಿ ಉದ್ರಿಕ್ತ ರೈತರು ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದರು.
ಶೇಖರಣಾ ಗೋದಾಮು, ಮೂಟೆ ಕಾರ್ಮಿಕರ ಕೊರತೆ ನೆಪವೊಡ್ಡಿ ರೈತರು ತಂದ ರಾಗಿ ಖರೀದಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದು ಈ ಹಿಂದೆ ಜಿಲ್ಲಾಧಿಕಾರಿಗಳು ನೀಡಿದ್ದ ಸೂಚನೆ ಪಾಲಿಸದ ಬಗ್ಗೆ ಕಿಡಿಕಾರಿದ ಪ್ರತಿಭಟನಾ ನಿರತರು, ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ ಹಿತ ಕಾಯುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಬಾರದ ಅಧಿಕಾರಿಗಳು: 2 ತಾಸು ನಿರಂತರವಾಗಿ ನಡೆದ ರಸ್ತೆ ತಡೆಯಿಂದಾಗಿ ಮದ್ದೂರು-ಕೊಪ್ಪ-ನಾಗಮಂಗಲ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಂಡುಪ್ರಯಾಣಿಕರು ಪರದಾಡಿದರೂ ಆಹಾರ ಇಲಾಖೆ ಅಧಿಕಾರಿಗಳೂ ಸೇರಿದಂತೆ ಯಾರೊ ಬ್ಬರೂ ಸ್ಥಳಕ್ಕಾಗಮಿಸದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನಾನಿರತರ ಮನವೊಲಿಸಿದರು.
ಎಚ್ಚೆತ್ತ ಅಧಿಕಾರಿಗಳು ಆಹಾರ ಮತ್ತು ನಾಗರೀಕ ಸರಬರಾಜು ಗೋದಾಮಿನಿಂದ ಲಾರಿ ಮತ್ತು ಮೂಟೆ ಕಾರ್ಮಿಕರನ್ನು ಕರೆತಂದು ರೈತರ ರಾಗಿ ಖರೀದಿಗೆ ಮುಂದಾದ ಬಳಿಕ ಪ್ರತಿಭಟನೆ ಹಿಂಪಡೆದರು.
ಮದ್ದೂರು ಆಹಾರ ಇಲಾಖೆ ಶಿರಸ್ತೇದಾರ್ ಚಂದ್ರಮ್ಮ ಮಾತನಾಡಿ, ಬೆರಳೆಣಿಕೆಯಷ್ಟು ಸಿಬ್ಬಂದಿ ಲಭ್ಯವಿರುವ ಕಾರಣ ರೈತರಿಗೆ ಸ್ಪಂದಿಸಲು ಅಸಾಧ್ಯವಾಗಿದ್ದು ಜಿಲ್ಲಾಧಿಕಾರಿಗಳೇ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದರು.
ಪ್ರತಿಭಟನೆ ವೇಳೆ ಕುಮಾರ್, ಚಂದ್ರಪ್ಪ, ಮನು, ಮನೋಹರ್, ಚಿಕ್ಕೋನು, ಸಿದ್ದಯ್ಯ, ರಾಮಣ್ಣ, ಚನ್ನಪ್ಪ, ಸುನೀಲ್ ನೇತೃತ್ವ ವಹಿಸಿದ್ದರು.