ಹುಣಸೂರು: ಅರಣ್ಯ ಇಲಾಖೆ ವತಿಯಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ನಾಗರಹೊಳೆ ಉದ್ಯಾನವನದಂಚಿನಲ್ಲಿ ರೈಲ್ವೆ ಕಂಬಿಯ ಬೇಲಿ ನಿರ್ಮಾಣಕ್ಕೆ ದಾಸ್ತಾನು ಮಾಡಿದ್ದ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಬಂದಿದ್ದ ವಾಹನಗಳನ್ನು ಕಾಡಂಚಿನ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ವನ್ಯ ಜೀವಿ ಹಾವಳಿ ಹೆಚ್ಚಿರುವ ಕಿಕ್ಕೇರಿಕಟ್ಟೆ ಗ್ರಾಮಸ್ಥರೇ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದು. ಅರಣ್ಯ ಇಲಾಖೆ ವತಿಯಿಂದ ಹುಲ್ಲೇಪುರ ಗ್ರಾಮದಿಂದ ಉತ್ತೇನಹಳ್ಳಿವರೆಗೆ ಒಟ್ಟು ನಾಲ್ಕು ಕಿಲೋಮೀಟರ್ ಕಾಡಾನೆ ಹಾವಳಿಗಾಗಿ ತಡೆ ಗೋಡೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು. ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ ಕಾಮಗಾರಿಯನ್ನು ಕೂಡ ಪ್ರಾರಂಭಿಸಲಾಗಿದೆ. ಆದರೆ ಇದೀಗ ಸಂಗ್ರಹಿಸಿಟ್ಟಿದ್ದ ರೈಲ್ವೆ ಕಂಬಿ ಮತ್ತಿತರ ಸಾಮಗ್ರಿಗಳನ್ನು ಜೆಸಿಬಿ ಮೂಲಕ ಲೋಡ್ ಮಾಡುತ್ತಿದ್ದ ವಿಷಯ ತಿಳಿದ ಕಿಕ್ಕೇರಿಕಟ್ಟೆ ಗ್ರಾಮಸ್ಥರು ರೈಲ್ವೆ ಕಂಬಿ ದಾಸ್ತಾನು ಮಾಡಿದ್ದ ಸ್ಥಳಕ್ಕೆ ದೌಡಾಯಿಸಿ. ಲಾರಿಗಳನ್ನು ಮುಂದೆ ಹೋಗದಂತೆ ತಡೆದು ಪ್ರತಿಭಟನೆ ನಡೆಸಿದರು.
ಸಾಮಗ್ರಿ ಸಾಗಿಸಲುಬಿಡಲ್ಲ ಪಟ್ಟು: ಬೆಂಗಳೂರಿನಲ್ಲಿದ್ದ ಶಾಸಕ ಎಚ್.ಪಿ.ಮಂಜುನಾಥ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಮ್ಮ ಗ್ರಾಮಕ್ಕೆ ಮಂಜೂರಾಗಿರುವ ಕಾಮಗಾರಿಯನ್ನು ಇಲ್ಲಿಂದಲೇ ಪ್ರಾರಂಭಿಸಬೇಕು ಕಳೆದ ಹತ್ತಾರು ವರ್ಷಗಳಿಂದ ಕಾಡಾನೆ ಹಾವಳಿ ಯಿಂದ ಬೇಸತ್ತು ಹೋಗಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿಗೆ ಮಂಜೂರಾಗಿರುವ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಶಾಸಕರ ಮನವೊಲಿಕೆ: ಪಟ್ಟು ಹಿಡಿದ ಗ್ರಾಮಸ್ಥರ ಮನವೊಲಿಸಿದ ಶಾಸಕ ಎಚ್ .ಪಿ.ಮಂಜುನಾಥ್ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು. ಉಡುವೇಪುರದಿಂದ ಉತ್ತೇನಹಳ್ಳಿ ವರೆಗೆ ಈ ಭಾಗದ ಮಣ್ಣು ಕಪ್ಪು( ಜೌಗು) ಮಣ್ಣಾಗಿದ್ದು ಕಾಮಗಾರಿ ನಡೆಸಲು ಸಾಧ್ಯವಿಲ್ಲ, ಆದ್ದರಿಂದ ನೂತನವಾಗಿ ಹೊಸ ತಂತ್ರಜ್ಞಾನದಿಂದ ಕೂಡಿದ ರೋಪ್ ವೇ (ಉಕ್ಕಿನ ಹಗ್ಗ) ಬೇಲಿಯನ್ನು ನಿರ್ಮಾಣ ಮಾಡಲಾಗುವುದು.
ಉದ್ಯಾನವನದ ಉತ್ತೇನಹಳ್ಳಿ ಗ್ರಾಮದಿಂದ ಅಳಲೂರು ಗ್ರಾಮದವರಿಗೆ ಬಾಕಿ ನಾಲ್ಕು ಕಿ.ಮೀ. ದೂರ ಬೇಲಿ ನಿರ್ಮಾಣ ಕಾಮಗಾರಿಗೆ ಇದೇ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎಂದು ಸಮಾಧಾನಪಡಿಸಿದರು. ಈಗಾಗಲೆ ತಾವು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು ಈ ಭಾಗದ ರೈತರು ಹಾಗೂ ಕೆಲ ಮುಖಂಡರು ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ರೋಪ್ ವೇ ಕಾಮಗಾರಿ ವೀಕ್ಷಣೆ ಮಾಡಿ ತೃಪ್ತಿಕರವಾಗಿದ್ದಲ್ಲಿ ಈ ಭಾಗದಲ್ಲಿ ರೋಪ್ ವೇ ಕಾಮಗಾರಿ ನಡೆಸಲಾಗುವುದೆಂಬ ಸಲಹೆಯನ್ನು ರೈತರು ಒಪ್ಪಿದರು.