Advertisement

ರೈತರೇ ಕಾಲುವೆ ಗೇಟ್‌ ತೆರೆದು ನೀರು ಬಿಟ್ರಾ

04:07 PM Sep 12, 2018 | Team Udayavani |

ಮುಂಡರಗಿ: ತುಂಗಭದ್ರಾ ಜಲಾಶಯ ಭರ್ತಿಯಾಗಿ ಹರಿಯುತ್ತಿದ್ದರೂ ಶಿಂಗಟಾಲೂರ ಏತ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೇವಾಂಶ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಡಂಬಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಡಂಬಳ ಗ್ರಾಮಸ್ಥರು ಡೋಣಿ ಗ್ರಾಮದಿಂದ ಗದಗ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ 3ನೇ ಕಾಲುವೆ ಮೂಲಕ ಡಂಬಳದ ವಿಕ್ಟೋರಿಯಾ ಮಹಾರಾಣಿ ಕೆರೆಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ, ಯುವ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ನೇತೃತ್ವದಲ್ಲಿ ಹಲವು ರೈತರು ಮಂಗಳವಾರ ಕಾಲುವೆಗೆ ತೆರಳಿ ಗೇಟನ್ನು ತಿರುಗಿಸಿ ಡಂಬಳ ಕೆರೆಗೆ ನೀರನ್ನು ಬಿಟ್ಟರು.

ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಹದಿನೈದು ದಿನಗಳಿಂದ ಅಧಿಕಾರಿಗಳಿಗೆ ಡಂಬಳ ಕೆರೆಗೆ ನೀರು ಭರ್ತಿ ಮಾಡಿ ಎಂದು ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಗದಗ ನಗರಕ್ಕೆ ಮಾತ್ರ ನೀರು ಪೂರೈಕೆಯಾದರೆ ನಾವು ಬದುಕುವುದು ಹೇಗೆ. ಕೆರೆ ಖಾಲಿಯಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ನೀರು ಇದ್ದರೂ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಬೆಳೆಗಳು ಒಣಗುತ್ತಿವೆ. ಮೂರು ಸಾವಿರ ಏಕರೆ ನೀರಾವರಿ ಪ್ರದೇಶಕ್ಕೆ ಅನುಕೂಲವಾಗುವ ಬೃಹತ್‌ ಕೆರೆ ಇದ್ದು, ಇದನ್ನು ನಂಬಿ ರೈತರು ಸಾವಿರಾರೂ ರೂಪಾಯಿಗಳ ಮಾಡಿ ಸಾಲ ಬಿತ್ತನೆ ಮಾಡಿದ್ದಾರೆ. ಒಂದು ವೇಳೆ ನಮ್ಮೂರ ಕೆರೆಗೆ ನೀರು ಸಮರ್ಪಕವಾಗಿ ಸಂಗ್ರಹವಾಗದೆ ಹೋದರೆ ಎಲ್ಲ ರೈತರು ಸೇರಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಯುವ ಮುಖಂಡ ಗೋಣಿಬಸಪ್ಪ ಕೋರ್ಲಹಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ ಕರೆ ನೀಡಿದರು. ನಂತರ ಉಪಹಶೀಲ್ದಾರ್‌ ಡಿ.ಟಿ. ವಾಲ್ಮೀಕಿ ಅವರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಪಂ ಅಧ್ಯಕ್ಷ ಬಸವರಾಜ ಎಂ. ಗಂಗಾವತಿ, ಹಿರಿಯರಾದ ಜಿ.ವಿ. ಹಿರೇಮಠ, ವೈ.ಎಚ್‌. ತಳವಾರ, ರೈತ ಮುಖಂಡರಾದ ವೀರೂಪಾಕ್ಷಪ್ಪ ಯಲಿಗಾರ, ಶೇಖಪ್ಪ ಗೋಡಿ, ಶೇಖಪ್ಪ ಕೊಂತಿಕೊಲ್ಲ, ಮಲ್ಲಪ್ಪ ಕರಡ್ಡಿ, ರೇವಣಸಿದ್ದಪ್ಪ ಕರಿಗಾರ, ರುದ್ರಪ್ಪ ಕೊರ್ಲಗಟ್ಟಿ, ಕುಮಾರಡ್ಡಿ ಪ್ಯಾಟಿ, ರವಿ ತಾರಿಕೊಪ್ಪ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next