ನರಗುಂದ: ಪ್ರಸಕ್ತ ಮುಂಗಾರು ಹಂಗಾಮು ಅವಧಿಯಲ್ಲಿ ತಾಲೂಕಿನಲ್ಲಿ ಮಳೆ ಕೊರತೆ ಕಾಣಿಸಿಕೊಂಡರೂ ಮಲಪ್ರಭೆ ಉಗಮ ಪ್ರದೇಶವಾದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ನವಿಲುತೀರ್ಥ ಜಲಾಶಯ ನೀರಿನ ಮಟ್ಟ ಏರಿಕೆ ತಾಲೂಕಿನ ರೈತರಲ್ಲಿ ಆಶಾಕಿರಣ ಮೂಡಿಸಿದೆ.
ಮಲಪ್ರಭೆ ಮೇಲ್ಮಟ್ಟದ ದಟ್ಟ ಪ್ರದೇಶದಲ್ಲಿ ಸಕಾಲದಲ್ಲಿ ಮಳೆ ಸುರಿಯುತ್ತಿದ್ದರಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಲ್ಲಿ ಮುಂಗಾರು ಆಸೆ ಚಿಗುರಿಸಿದೆ. ಸುರಿಯುವ ಮಳೆ ಜೀವನಾಡಿ ಮಲಪ್ರಭೆ ಒಡಲು ತುಂಬಿಸಬಹುದು ಎಂಬ ಮಹದಾಸೆ ಇಲ್ಲಿನ ಅನ್ನದಾತರಲ್ಲಿ ಭರವಸೆ ಚಿಗುರೊಡೆಯುತ್ತಿದೆ.
ಪ್ರಸಕ್ತ ಮುಂಗಾರು ಸಹ ಕೈ ಕೊಡಬಹುದೇನೋ ಎಂಬ ಆತಂಕದಲ್ಲಿದ್ದ ತಾಲೂಕಿನ ರೈತರಿಗೆ ಕಳೆದ ಮೂರು ದಿನಗಳ ಮುಂಗಾರು ವಾತಾವರಣ ಅದರಲ್ಲೂ ಮಲಪ್ರಭೆ ಒಡಲು ನೀರಿಕ್ಷೆಗೂ ಮೀರಿ ತುಂಬಿ ಹರಿದು ಅಧಿಕ ನೀರು ನವಿಲುತೀರ್ಥ ಜಲಾಶಯ ಅಂಗಳಕ್ಕೆ ಬರುತ್ತಿರುವುದು ರೈತರ ಸಂತಸ ಇಮ್ಮಡಿಗೊಳಿಸಿದೆ.
ನೀರಿನ ಮಟ್ಟ: ರವಿವಾರ ನವಿಲುತೀರ್ಥ ಜಲಾಶಯ ಮಟ್ಟ ಏರಿಕೆಯಾಗಿದೆ.2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇಂದಿಗೆ 2054.10 ಅಡಿ ನೀರು ಸಂಗ್ರಹವಾಗಿದೆ. 6796 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಮಳೆ ವಾತಾವರಣ ಮೂಡಿದ್ದರಿಂದ ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಕಳೆದ 3 ವರ್ಷ ಸತತ ಮುಂಗಾರು ವೈಪಲ್ಯ ರೈತರನ್ನು ಕಾಡಿತ್ತು.
ಆದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮೇಲೆ ಅಪಾರ ವಿಶ್ವಾಸದಿಂದ ತೇವಾಂಶ ಇಲ್ಲದೇ ಇದ್ದರೂ ದೇವರ ಮೇಲೆ ಭಾರ ಹಾಕಿ ಭೂಮಿಗೆ ಬೀಜ ಹಾಕಿ ಕುಳಿತ ರೈತನಿಗೆ ಜಲಾಶಯ ಮಟ್ಟ ಏರಿಕೆ ಹರ್ಷದಾಯಕವಾಗಿದೆ. ಆದರೆ ಮಳೆ ಕೊರತೆ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಇನ್ನೂ ಚಾಲನೆ ಸಿಕ್ಕಿಲ್ಲ್ಲ ಎಂಬ ಕೊರಗೂ ಇದೆ.
ಒಟ್ಟಾರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜೀವನಾಡಿ ಮಲಪ್ರಭೆ ಜಲಾಶಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿದು ಬರುತ್ತಿರುವುದು ಆಶಾದಾಯಕ ವಾತಾವರಣ ಮೂಡಿಸಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ