ಬಜಪೆ: ಬಜಪೆ ಗ್ರಾಮದ ನೆಲ್ಲಿದಡಿ ಶ್ರೀ ಕಾಂತೇರು ಜುಮಾದಿ ಬಂಟ ದೈವಸ್ಥಾನವನ್ನು ನೆಲ್ಲಿದಡಿ ಕುಟುಂಬ ಹಾಗೂ ಗ್ರಾಮಸ್ಥರಿಗೆ ಶಾಶ್ವತವಾಗಿ ಕೊಡತಕ್ಕದ್ದು. ಕಲ್ಲಜರಿ ರಸ್ತೆಯನ್ನು ಹಿಂದಿನಂತೆ ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಬಜಪೆ ಗ್ರಾಮ ಪಂಚಾಯತ್‌ನ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಜಪೆ ಗ್ರಾಮದ ರೈತರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂಬಂಧ ರೈತರು, ಕಂಪೆನಿಗಳು, ಸರಕಾರದ ಜತೆ ಮಾತುಕತೆಗೆ ಸಿದ್ಧರಾಗಬೇಕು. ಪ್ರಾಣತೆತ್ತಾದರೂ ಈ ವಿಚಾರದಲ್ಲಿ ರೈತರು ದೈವಸ್ಥಾನವನ್ನು ಬಿಟ್ಟು ಕೋಡುವುದಿಲ್ಲ. ಜಮೀನು ಕಳೆದುಕೊಂಡವರಿಗೆ ಸೂಕ್ತ ಉದ್ಯೋಗ ಮತ್ತು ಅದಕ್ಕೆ ತಕ್ಕುದಾದ ಪರಿಹಾರ ಸಿಗಲೇಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಯಿತು. ನೆಲ್ಲಿದಡಿ ಗುತ್ತುಮನೆಯ ಲಕ್ಷ್ಮಣ್ ಚೌಟ ಅಧ್ಯಕ್ಷತೆ ವಹಿಸಿದ್ದರು.
ಹಸಿರು ಸೇನೆಯ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು ಮಾತನಾಡಿ, 8 ವರ್ಷಗಳಿಂದ ರೈತ ಸಂಘವು ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿನ ರೈತರು ಕಂಪೆನಿಗಳಿಂದ ತೊಂದರೆಯಾಗಿದೆ ಎಂದು ದೂರಿದ್ದಾರೆ. ಇದರಿಂದ ರೈತರ ಸಮಸ್ಯೆಯನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಈ ಸಭೆಯನ್ನು ಅಯೋಜಿಸಲಾಗಿದೆ. ದೈವಸ್ಥಾನದ ಉಳಿಸುವ ಬಗ್ಗೆ ಈಗಾಗಲೇ ಪಂಚಾಯತ್, ಗ್ರಾಮ ಸಭೆ ನಿರ್ಣಯ ತೆಗೆದುಕೊಂಡಿದೆ. ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಸ್ಥಳ ಪರಿಶೀಲನೆಗೆ ಮನವಿ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಜಿ ಮಥಾಯಸ್ ಮಾತನಾಡಿ, ನೆಲ್ಲಿದಡಿ ದೈವಸ್ಥಾನ ಹಾಗೂ ರಸ್ತೆಯ ಬಗ್ಗೆ ಈಗಾಗಲೇ ಪಂಚಾಯತ್ ನಿರ್ಣಯ ತೆಗೆದುಕೊಂಡಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಕೂಡ ಮಾಡಲಾಗಿದೆ. ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಪಂಚಾಯತ್ ಸಹಕಾರ ನೀಡುತ್ತದೆ ಎಂದರು.
ರೈತ ಸಂಘ ಜಿಲ್ಲಾ ಸಂಘಟನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು ಮಾತನಾಡಿ, ಶೇ.60 ಮಂದಿಗೆ ಭೂಮಿ ಕಳೆದುಕೊಂಡ ಮೇಲೆ ಪರಿಜ್ಞಾನದ ಅನುಭವ ಬಂದಿದೆ. ಪಂಚಾಯತ್ ನಿರ್ಣಯ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಅದು ಗ್ರಾಮಸ್ಥರು ತೆಗೆದುಕೊಂಡ ನಿರ್ಧಾರ. ಅದನ್ನು ಅನುಷ್ಠಾನ ಗೊಳಿಸಬೇಕಾಗಿರುವುದು ಜಿಲ್ಲಾಧಿಕಾರಿಯವರು. ಜನರ ನಿಮ್ಮ ಬೆಂಗಾವಲಾಗಿ ರೈತ ಸಂಘ ಇದೆ. ರೈತ ಶಕ್ತಿಯ ಮುಂದೆ ತಲೆಬಾಗಲೇಬೇಕು. ಒಟ್ಟಾಗಿ ಹೋರಾಟ ಮಾಡೋಣ ಎಂದರು.
ರೈತ ಸಂಘದ ಜಿಲ್ಲಾ ಕೋಶಾಧಿಕಾರಿ ಮಂಜುನಾಥ ರೈ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಕಲೀಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮದ್ ಶರೀಫ್, ರಾಜ್ ಮೋಹನ್ ಮುದ್ದ ಉಪಸ್ಥಿತರಿದ್ದರು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.