ಬಂಗಾರಪೇಟೆ: ಹಣವಂತರು ರಾಜಕೀಯ ಬೆಂಬಲಿಗರು, ಕಾರ್ಪೊರೇಟ್ ಕಂಪನಿ, ಶ್ರೀಮಂತರು ನೂರಾರು ಎಕರೆ ಒತ್ತುವರಿ ಮಾಡಿಕೊಂಡು ಮೋಜು ಮಸ್ತಿಗಾಗಿ ನೂರಾರುಹಳ್ಳಿಗಳ ಜೀವನಾಡಿಯಾಗಿರುವ ಕೆರೆ, ಗೋಮಾಳ ತೆರವುಗೊಳಿಸಲು ತಾಲೂಕು ಆಡಳಿತ ಹಿಂದೇಟುಹಾಕುತ್ತಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಡ ರೈತ 1 ಗುಂಟೆ ಒತ್ತುವರಿ ಮಾಡಿಕೊಂಡರೆ ಆಕಾಶವೇ ಕಳಚಿ ತಲೆ ಮೇಲೆಬಿದ್ದಂತೆ ನೂರೊಂದು ಕೇಸು ದಾಖಲಿಸಿ ಒತ್ತುವರಿತೆರವುಗೊಳಿಸುವ ತಾಲೂಕು ಆಡಳಿತಕ್ಕೆ ರಾಜ್ಯ ಹೈಕೋರ್ಟ್ ಆದೇಶ ಪಾಲನೆ ಮಾಡಿ ಸರ್ಕಾರಿ ಭೂಮಿಯನ್ನು ಒತ್ತುವರಿ ತೆರವುಗೊಳಿಸಲುಹಿಂದೇಟು ಹಾಕುತ್ತಿರುವುದಕ್ಕೆ ರಾಜಕೀಯ ಒತ್ತಡದ ಅನುಮಾನ ವ್ಯಕ್ತವಾಗಿದೆ.
ತಾಲೂಕಿನ ಕಸಬಾ ಹೋಬಳಿ ವಗ್ಗಯ್ಯನದಿನ್ನೆ ಗ್ರಾಮದ ಸರ್ವೆ ನಂ. 44 ರಲ್ಲಿ 17 ಎಕರೆ 28 ಗುಂಟೆ ಹಾಗೂ ಹುದುಕುಳ ಗ್ರಾಮದ ಸರ್ವೆ ನಂ. 253ರಲ್ಲಿ 20 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಾನ್ಫ್ಡೆಂಟ್ ಗ್ರೂಪ್ ಮಾಲೀಕರು ಗಾಲ್ಫ್ ನನ್ನು ನಿರ್ಮಿಸಿದ್ದು, ಒತ್ತುವರಿ ತೆರವುಗೊಳಿ ಸುವಂತೆ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರಯವರ ವರದಿಯಂತೆ ಒತ್ತುವರಿಯಾಗಿರುವುದು ಸಾಭೀತಾಗಿ ಒತ್ತುವರಿ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಆದೇಶವಿದ್ದರೂ ಜಿಲ್ಲಾಡಳಿತಹಾಗೂ ತಾಲೂಕು ಆಡಳಿತ ಮೌನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಗೌರವಾನ್ವಿತ ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶದಂತೆ ಗಾಲ್ಫ್ ಮಾಲೀಕರು ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಅ.20ರಂದು ಜಾನುವಾರುಗಳ ಸಮೇತ ರಾಜ್ಯ ಹೆದ್ದಾರಿ ಹಂಚಾಳಗೇಟ್ ಬಂದ್ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ಶೇಷ ತಂಡ ರಚನೆಮಾಡಿ ಮುಂಗಾರು ಮಳೆಯಿಂದ ರೈತರ ಬೆಳೆ, ಜನಸಾಮಾನ್ಯರ ಪ್ರಾಣವನ್ನು ಕಾಪಾಡುವಂತೆತಾಲೂಕು ಆಡಳಿತಕ್ಕೆ ಒತ್ತುವರಿ ಜಾಗಗಳ ದಾಖಲೆಗಳ ಸಮೇತ ನೀಡಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪ್ರ.ಕಾ.ಫಾರೂಕ್ ಪಾಷ, ವಕ್ಕಲೇರಿ ಹನುಮಯ್ಯ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಕಾಮಸಮುದ್ರ ಮುನಿಕೃಷ್ಣ, ನಾಗಯ್ಯ, ಮುನಿರಾಜು, ವಿಶ್ವ, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ,ರಾಮಸಾಗರ ವೇಣು, ಮಾಲೂರು ಯಲ್ಲಣ್ಣ,ಯಲುವಳ್ಳಿ ಪ್ರಭಾಕರ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ವಕ್ಕಲೇರಿ ಹನುಮಯ್ಯ,ಮಂಗಸಂದ್ರ ತಿಮ್ಮಣ್ಣ, ರಾಮಮೂರ್ತಿ, ಬಂಗಾರಿಮಂಜು, ರಾಜೇಶ್, ಭಾಸ್ಕರ್ ಸುನಿಲ್ ಕುಮಾರ್, ಗುರುಸ್ವಾಮಿ, ಮಳಾ ತಾಲೂಕು ಅಧ್ಯಕ್ಷೆ ರಮಾಮಣಿ, ವೆಂಕಟಮ್ಮ, ರಾಮಕ್ಕ ಇತರರಿದ್ದರು.