ಮಧುಗಿರಿ: ಕ್ಷೇತ್ರದ ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿ ವ್ಯವಸಾಯ ಮಾಡಿದರೆ ಸಾಧ್ಯವಾದಷ್ಟು ಲಾಭ ಗಳಿಸಬಹುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು. ಪಟ್ಟಣದ ತಾಪಂನ ಸಾಮರ್ಥ್ಯಸೌಧ ಕಟ್ಟಡದಲ್ಲಿ ಜಿಪಂ ಹಾಗೂ ತಾಪಂ ಸಹಯೋಗದೊಂದಿಗೆ ತಾಲೂಕು ಕೃಷಿ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾವಯವ ಗೊಬ್ಬರ ಬಳಸಿ: ಪ್ರಸ್ತುತ ದಿನಗಳಲ್ಲಿ ವ್ಯವಸಾಯ ನಶಿಸುತ್ತಿದೆ. ಇದಕ್ಕೆ ಮಳೆಯ ಅಭಾವ, ಬೆಳೆಗೆ ಬೆಂಬಲ ಬೆಲೆ ಸಿಗದಿರುವುದು ಸೇರಿದಂತೆ ಫಲವತ್ತತೆ ಹಾಗೂ ಮಾನವ ಸಂಪನ್ಮೂಲದ ಕೊರತೆ ಕಾರಣವಾಗಿದೆ. ರೈತರು ಕೃಷಿ ಇಲಾಖೆ ನೀಡುವ ಮಾರ್ಗದರ್ಶನದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆ ಬೆಳೆದರೆ ಖಂಡಿತ ಲಾಭ ಗಳಿಸಬಹುದು. ತಾಲೂಕಿನಲ್ಲಿನ ರೈತರು ಹಳೇ ವ್ಯವಸಾಯ ಪದ್ಧತಿ ಕೈಬಿಡಬೇಕಿದೆ. ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಗೊಬ್ಬರ ಬಳಕೆಯಿಂದ ಲಾಭದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಉತ್ತಮ ಕೃಷಿ ಕಾಯಕ ಮಾಡಿ: ಸರ್ಕಾರ ಎತ್ತಿನಹೊಳೆ ಕಾಮಗಾರಿಗೆ ಹೆಚ್ಚಿನ ಹಣ ಮೀಸಲಿಟ್ಟಿದ್ದು, 3-4 ವರ್ಷಗಳಲ್ಲಿ ತಾಲೂಕಿನ 52 ಕೆರೆಗಳಿಗೂ ನೀರು ಹರಿಯಲಿದೆ. ಇದಕ್ಕಾಗಿ ಇಂಥ ಕಾರ್ಯಾಗಾರದಲ್ಲಿ ಭಾಗವಹಿಸಿದ ರೈತರು ಇಲಾಖೆ ನೀಡುವ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಕೃಷಿ ಕಾಯಕ ಮಾಡಬೇಕೆಂದು ಮನವಿ ಮಾಡಿದರು.
ಪ್ರಯೋಜನಾಕಾರಿ ಸಂಗತಿ: ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಕೃಷಿ ಉಪ ನಿರ್ದೇಶಕ ಅಶೋಕ್, ರೈತರು ಮಣ್ಣಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಗುಣಲಕ್ಷಣ ಅರಿತರೆ ಬೆಳೆ ಬೆಳೆಯಲು ಸುಲಭ ಸಾಧ್ಯ ಎಂದರು. ಅದಕ್ಕಾಗಿ ಎಲ್ಲಾ ರೈತರು ತಮ್ಮ ಜಮೀನಿನ ಮಣ್ಣಿನ ಆರೋಗ್ಯ ಹಾಗೂ ಗುಣ ಲಕ್ಷಣ ತಿಳಿದು ವ್ಯವಸಾಯ ಮಾಡಬೇಕು. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಾಕಾರಿ ಎಂದರು.
ಈ ವೇಳೆ ತಾಪಂ ಇಒ ನಂದಿನಿ, ಸದಸ್ಯ ದೊಡ್ಡಯ್ಯ, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ರೈತ ಮುಖಂಡರಾದ ಕರಿಯಣ್ಣ, ತುಂಗೋಟಿ ರಾಮಣ್ಣ, ಎಒಗಳಾದ ಶಿವಣ್ಣ, ಕವಿತಾ, ಬೆಂಗಳೂರು ಜಿಕೆವಿಕೆ ಸಂಸ್ಥೆಯ ಯುವ ವಿಜ್ಞಾನಿಗಳಾದ ಅನಿಲ್, ನವೀನ್, ಡಾ.ನಾಗರಾಜು, ಗ್ರಾಪಂ ಸದಸ್ಯ ಮುತ್ಯಾಲಪ್ಪ, ನೂರಾರು ರೈತರು ಹಾಗೂ ಮುಖಂಡರು ಭಾಗವಹಿಸಿದ್ದರು.