ಬ್ಯಾಡಗಿ: ಕಳೆದೆರಡು ತಿಂಗಳಿನಿಂದ ಮೋಟೆಬೆನ್ನೂರ ಭಾಗಕ್ಕೆ ತ್ರಿಫೇಸ್ ವಿದ್ಯುತ್ ಪೂರೈಸದ ಹೆಸ್ಕಾಂ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹೆಸ್ಕಾಂ ಕಚೇರಿಯ ಗೇಟ್‌ಗೆ ಬೀಗ ಹಾಕಿ ಧರಣಿ ನಡೆಸಿದರು.
ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ವಿಚಾರಿಸಲೆಂದು ರೈತ ಸಂಘದ ಕಾರ್ಯಕರ್ತರು ಹೆಸ್ಕಾಂ ಕಚೇರಿಗೆ ಆಗಮಿಸಿದ್ದರು. ಆದರೆ, ಅಧಿಕಾರಿಗಳಿಂದ ಸೂಕ್ತ ಉತ್ತರ ಸಿಗದ ಪರಿಣಾಮ ಕಂಗಾಲಾದ ರೈತರು ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಹೊರ ಹಾಕಿ ಪ್ರತಿಭಟನೆಗೆ ಮುಂದಾದರು. ಪರಿಣಾಮ ಬಿಲ್ ಪಾವತಿ ಸೇರಿದಂತೆ ಇನ್ನಿತರ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ತೊಮದರೆಯಾಯಿತು.
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ತ್ರಿಫೇಸ್ ವಿದ್ಯುತ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮೋಟೆಬೆನ್ನೂರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯಲು ಸಹ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪ್ರಶ್ನಿಸಿದರೇ ನಾಳೆ, ನಾಡಿದ್ದು ಎನ್ನುವ ಹಾರಿಕೆ ಉತ್ತರಗಳನ್ನು ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ. ಹೆಸ್ಕಾ ಸಿಬ್ಬಂದಿ ಎಂದರೆ ಸುಳ್ಳುಕೋರರ ಕೂಟ ಎನ್ನುವಂತಾಗಿದೆ ಎಂದು ಆರೋಪಿಸಿದರು.
ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಕ್ಯಾಬೇಜ್ ಬೆಳೆ ಕೀಳುವ ಹಂತಕ್ಕೆ ಬಂದಿದೆ. ಎತ್ತರಪ್ರದೇಶದ ಭೂಮಿಗಳಲ್ಲಿ ಅಷ್ಟೋ ಇಷ್ಟೋ ಕ್ಯಾಬೇಜ್ ಬೆಳೆ ಸಿಗುತ್ತಿದೆ. ಆದರೆ, ಅದನ್ನು ಕೀಳಲು ಸಹ ಕೊಳವೆಬಾವಿಗಳ ನೀರು ಅವಶ್ಯವಿದೆ. ಆದರೆ, ತ್ರಿಫೇಸ್ ವಿದ್ಯುತ್ ಇಲ್ಲದೇ ಯಾವುದೇ ಕೆಲಸ ಮಾಡಲಾಗದೆ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಆರೋಪಿಸಿದರು.
ಗಂಗಣ್ಣ ಎಲಿ ಮಾತನಾಡಿ, ತ್ರಿಫೇಸ್ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯಲೂ ನೀರು ಸಿಗುತ್ತಿಲ್ಲ. ಹೊಲಕ್ಕೆ ಹೋಗುವವರು ಮನೆಯಿಂದಲೇ ಕುಡಿಯುವ ನೀರು ತುಂಬಿಕೊಂಡು ಹೋಗಬೇಕಾಗಿದೆ. ಇನ್ನಾದರೂ ಅಧಿಕಾರಿಗಳು ರೈತರ ಸಮಸ್ಯೆ ಅರಿತು ವಿದ್ಯುತ್ ಪೂರೈಕೆಯಲ್ಲಿ ನ್ಯಾಯ ದೊರಕಿಸಲಿ ಎಂದು ಒತ್ತಾಯಿಸಿದರು.