ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆಯಲ್ಲಿರುವ ಜೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದ ವಿವಿಧ ಗ್ರಾಮಗಳ ರೈತರು ಹಗಲಿನ 7 ತಾಸು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದ ಘಟನೆ ನಡೆದಿದೆ.
ತೆಕ್ಕಲಕೋಟೆಯಲ್ಲಿರುವ 33 ಕೆವಿ ವಿದ್ಯುತ್ ಸರಬರಾಜು ಕೇಂದ್ರಕ್ಕೆ ರೈತರ ಮುತ್ತಿಗೆ ಹಾಕಿ ಬೀಗ ಜಡಿದು ಜೆಸ್ಕಾಂ ಕಚೇರಿಯ ಮುಂದೆ ಧರಣಿಯನ್ನು ನಡೆಸಿದರು.
ತಾಲ್ಲೂಕಿನ ಉಪ್ಪಾರ ಹೊಸಳ್ಳಿ, ಬಲಕುಂದಿ, ಮೈಲಾಪುರ ಹಳೇಕೋಟೆ ಗ್ರಾಮದ ರೈತರು ರಾತ್ರಿ ಪಾಳಿ(11 ರಿಂದ 6) ವರೆಗಿನ 7 ತಾಸು ವಿದ್ಯುತ್ ಪೂರೈಕೆ ಅವಧಿ ಬದಲಾಯಿಸಿ ಹಗಲಿನಲ್ಲಿ ಯಥಾಪ್ರಕಾರ ಮುಂದುವರಿಸುವಂತೆ ಆಗ್ರಹಿಸಿದರು.
ಈಗಾಗಲೆ ಮಳೆಗೆ ಬಿತ್ತನೆ ಮಾಡಲಾದ ತೊಗರಿ, ಜೋಳ, ಭತ್ತ, ನವಣೆ, ಕಬ್ಬು, ಮೆಕ್ಕೆ ಜೋಳ, ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪೇರಲ, ಪಪ್ಪಾಯಿ, ದಾಳಿಂಬೆ, ಮಲ್ಲಿಗೆ ಮುಂತಾದ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಹಗಲಿನ ಪಾಳಿ ಮುಂದುವರಿಸಬೇಕು ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಇಲಾಖೆಯಎಇಇ ನವೀನ್ ಕುಮಾರ್ ರೈತರೊಂದಿಗೆ ಮಾತನಾಡಿ ಹಗಲಿನ ಪಾಳೆಯಲ್ಲಿ ವಿದ್ಯುತ್ತನ್ನು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಧರಣಿಯನ್ನು ರೈತರು ವಾಪಸ್ ಪಡೆದರು.
ರೈತ ಮುಖಂಡರಾದ ಶರಣ ಬಸವನಗೌಡ, ವೆಂಕಟೇಶಗೌಡ ದ್ಯಾವಪ್ಪ, ವೀರೇಶಪ್ಪ, ಬೇಡರ ಸೀನಪ್ಪ, ಯಾಳ್ಗಿ ವೆಂಕಟೇಶ, ನಾಗಲಿಂಗ ಕುಂಬಾರ ಬಸಪ್ಪ, ಬಸವರಾಜ, ಬಸರಾಜಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.