Advertisement

ಕೆಐಎಡಿಬಿ ಕಾಯ್ದೆ ತಿದ್ದುಪಡಿಯಿಂದ ರೈತರ ಭೂ ಪರಿಹಾರ ಸರಳ: ನಿರಾಣಿ

06:16 PM Mar 25, 2022 | Team Udayavani |

ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

Advertisement

ಶುಕ್ರವಾರ ವಿಧಾನಸಭೆಯಲ್ಲಿ ಶಾಸಕ ಎನ್‌.ಎ.ಹ್ಯಾರಿಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚೆಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಹೊಸ ಭೂ ಸ್ವಾದೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಾವು ಯಾವುದೇ ವಿಳಂಬವಾಗದಂತೆ ಪರಿಹಾರವನ್ನು ವಿತರಣ ಮಾಡಲಿದ್ದೇವೆ ಎಂದರು.

ಕೆಐಎಡಿಬಿ ಕಾಯ್ದೆ ಕಾಲಂ 28/4 ಅಡಿ ಅಂತಿಮ ಅಸೂಚನೆ ಹೊರಡಿಸಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ದರ ನಿಗದಿ ಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರದೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಪಡಿಸುತ್ತಾರೆ ಎಂದು ನಿರಾಣಿ ಮಾಹಿತಿ ನೀಡಿದರು.

ಕೆಐಎಡಿಬಿ ವತಿಯಿಂದ ಭೂ ಸ್ವಾಧೀನಪಡಿಸಿದ ಜಮೀನಿಗೆ ಪಡೆಯುವ ಪರಿಹಾರ ಮೊತ್ತಕ್ಕೆ ಮೀರದ ಮೊತ್ತದಲ್ಲಿ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ರಿಯಾಯ್ತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

Advertisement

ಕೆಐಎಡಿಬಿಯಿಂದ ಭೂ ಸ್ವಾಧೀನ ಪಡಿಸಿ ಕೊಳ್ಳುತ್ತಿರುವ ಕೈಗಾರಿಕಾ ಪ್ರದೇಶದ ಜಮೀನುಗಳಿಗೆ ಭೂ ಪರಿಹಾರದ ಬದಲಾಗಿ ಪ್ರತಿ ಎಕರೆ ಜಮೀನಿಗೆ ನೀಡುತ್ತಿರುವ ಅಭಿವೃದ್ಧಿಪಡಿಸಿದ 9,583 ಚದರಡಿ ವಿಸ್ತೀರ್ಣದಿಂದ 10,781 ಚದರಿ ವಿಸ್ತೀರ್ಣಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಅಭಿವೃದ್ಧಿಪಡಿಸಿದ ಜಮೀನನ್ನು ನೀಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿ ಇರುತ್ತದೆ ಎಂದರು.

ಜಮೀನುಗಳಿಗೆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾತೆದಾರರು, ಹಿತಾಸಕ್ತದಾರರಿಗೆ ಆರ್ಟಿಜಿಎಸ್‌ ಮುಖಾಂತರ ಭೂಮಾಲೀಕರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ನಿರಾಣಿ ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next