ವಿಜಯಪುರ: ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಪ್ರಧನಿ ಮೋದಿ ಅವರ ಫೇಕ್ ಪ್ರೊಡಕ್ಷನ್ ಫ್ಯಾಕ್ಟರಿ ಅತ್ಯಂತ ಬಲಿಷ್ಠವಾಗಿದೆ. ಆದರೆ ರಾಜಧಾನಿ ಪಕ್ಕದಲ್ಲೇ ರೈತರು ಕುಟುಂಬ ಸಮೇತ ಹೋರಾಟಕ್ಕಿಳಿದು ಎರಡು ತಿಂಗಳಾದರೂ ಭೇಟಿಯ ಮಾತಿರಲಿ ಸೌಜನ್ಯಕ್ಕೂ ತಮ್ಮ ಸಾಮಾಜಿಕ
ಜಾಲತಾಣದಲ್ಲಿ ಪ್ರತಿಕ್ರಿಯಿಸುವ ಸೌಜನ್ಯ ತೋರಿಲ್ಲ. ಇದು ಪ್ರಧಾನಿ ಮೋದಿ ದುರ್ಬಲ ಎಂಬುದರ ಪ್ರತೀಕ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ವಾಗ್ಧಾಳಿ ನಡೆಸಿದರು.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಗೂರ ಗಡಿಯಲ್ಲಿ ದೇಶದ ಅನ್ನದಾತ ಕೇಂದ್ರದ ರೈತ ವಿರೋಧಿ ಕಾಯ್ದೆಗಳ
ಜಾರಿ ವಿರೋ ಧಿಸಿ ಕೊರೆವ ಚಳಿಯನ್ನೂ ಲೆಕ್ಕಿಸದೇ ಹೋರಾಟಕ್ಕಿಳಿದಿದ್ದಾರೆ. ಆದರೆ ಪ್ರಧಾನಿ ಮಾತಿರಲಿ ಬಿಜೆಪಿ ನಾಯಕರೂ ಸೌಜನ್ಯಕ್ಕೂ ಭೇಟಿ ನೀಡದೇ ಸಭೆ ನಡೆಸುವುದಕ್ಕೆ ಸೀಮಿತ ಮಾಡಿರುವುದು ಇವರಿಗೆ ಜನರನ್ನು ಎದುರಿಸುವ ಶಕ್ತಿ ಇಲ್ಲದ್ದನ್ನು ಮನವರಿಕೆ ಮಾಡಿಸುತ್ತದೆ ಎಂದು ಹರಿಹಾಯ್ದರು.
ಆರೆಸ್ಸೆಸ್ ಅಜೆಂಡಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೇರ್ಪಡೆ ಮಾಡಿ ಸುಳ್ಳಿನ ಪ್ರಚಾರ ಹೆಚ್ಚಾಗಿ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯವನ್ನು ಹೊರ ತರುವ ಕೆಲಸ ಮಾಡಲಿದೆ, ಇದಕ್ಕಾಗಿ ನುರಿತ ತಂಡ ಸನ್ನದ್ಧಗೊಳಿಸುತ್ತಿದ್ದು ಜಾಲತಾಣಗಳಲ್ಲಿ ಸತ್ಯ ಹೊರ ಹಾಕಲು ಮುಂದಾಗಲಿದೆ ಎಂದರು.
2013ರಿಂದಲೇ ನಮ್ಮ ದೇಶ ಪ್ರಗತಿಯಾಗಿದೆ ಎನ್ನುವ ಸುಳ್ಳನ್ನು ಬಿತ್ತುತ್ತಿದ್ದಾರೆ. ರಾಜ್ಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕೆಲಸ ಕಣ್ಮರೆಯಾಗಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಜನಪರ ಕಾರ್ಯಕ್ರಮಗಳಿಲ್ಲದಿದ್ದರೆ ಕೋವಿಡ್ ಸಂಕಷ್ಟದ ಪರಿಸ್ಥಿತಿ ಎದುರಿಸಲು ರಾಜ್ಯದ ಯಡಿಯೂರಪ್ಪ ಸರ್ಕಾರಕ್ಕೆ ಸಾಧ್ಯವಾಗುತ್ತಿರಲಿಲ್ಲ. ನರೇಗಾ ಹಾಗೂ ಅನ್ನಭಾಗ್ಯಗಳಂಥ ಯೋಜನೆಗಳಿಂದಾಗಿ ದೇಶ-ರಾಜ್ಯದ ಬಡವರ ಬದುಕು ಹಸನಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರಗಳ ಸುಳ್ಳು ಪ್ರಚಾರಕ್ಕೆ ಬದಲಾಗಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮನೆ-ಮನಗಳಿಗೆ ತಿಳಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಶ್ರಮಿಸಲಿದೆ ಎಂದರು.
ಕಾಂಗ್ರೆಸ್ ಹಾಗೂ ದೇಶದ ಶಕ್ತಿ ಮಹಿಳೆಯರಾದರೂ ಮಹಿಳೆಯನ್ನು ಈಗಲೂ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲಾಗುತ್ತಿದೆ, ಮಹಿಳಾ ಮೀಸಲಾತಿ ಜಾರಿಗೆ ತರದಿದ್ದರೆ ಮಹಿಳೆಗೆ ರಾಜಕೀಯ ಅ ಧಿಕಾರ ಗಗನ ಕುಸುಮವಲ್ಲ ಕನಸಿನ ಮಾತಾಗುತ್ತಿತ್ತು. ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನಬದ್ಧವಾಗಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ರಾಜಕೀಯದಲ್ಲಿ ಶೇ. 33 ಮೀಸಲು ಕಲ್ಪಿಸಿದ್ದೇ ಕಾಂಗ್ರೆಸ್ ಪಕ್ಷ ಹಾಗೂ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಂಬುದು ನಮ್ಮ ಪಕ್ಷದ ಹಿರಿಮೆ ಎಂದರು.
ಸುಳ್ಳುಗಳ ಕೋಟೆ ಕಟ್ಟಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟಿಸುವ ಹಾಗೂ ಧ್ವನಿ ಎತ್ತುವವರ ವಿರುದ್ಧ ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ಅಚ್ಛೇ ದಿನ ಕೊಡುವ ಆಶ್ವಾಸನೆ ನೀಡಿದವರು ಕನಿಷ್ಠ ಅಚ್ಛೆ ರಸ್ತೆಯನ್ನೂ ನೀಡಿಲ್ಲ, ಶುದ್ಧ ನೀರನ್ನೂ ಕೊಡುತ್ತಿಲ್ಲ, ರಿಯಾಯಿತಿ ಕೊಡುವ ಮಾತನಾಡಿ ಅಡುಗೆ ಅನಿಲ, ಇಂಧನ ಬೆಲೆ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ಪ್ರಾಮಾಣಿಕತೆ ಇದ್ದಲ್ಲಿ ಉಜ್ವಲ ಯೋಜನೆ ಸಬ್ಸಿಡಿ ನೀಡಿಕೆ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.