ಸುರಪುರ: ಕರ್ನಾಟಕ ರಾಜ್ಯ ರಹಿತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆ ಸಮೀಕ್ಷೆಯಲ್ಲಿ ಆಗಿರುವ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡ ಹಣಮಂತ್ರಾಯ ಮಡಿವಾಳ ಮಾತನಾಡಿ, ಬೆಳೆ ಸಮೀಕ್ಷೆ ವರದಿಯಲ್ಲಿ ಸಾಕಷ್ಟು ತಪ್ಪುಗಳು ಇವೆ. ಪಹಣಿಯಲ್ಲಿ ಬೇರೆ ಬೆಳೆ ನಮೂದು ಮಾಡಲಾಗಿದೆ. ಇದಕ್ಕೆ ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಕಂದಾಯ ಇಲಾಖೆಯಿಂದ ಮಾಡಿರುವ ಬೆಳೆ ಸಮೀಕ್ಷೆಗೂ ವಾಸ್ತವಿಕ ಬೆಳೆಗೂ ತಾಳೆಯಾಗುತ್ತಿಲ್ಲ. ಇನ್ನೂ ಕೆಲ ಪಹಣಿಗಳಲ್ಲಿ ರೈತರ ಹೆಸರು ಮತ್ತು ಸರ್ವೇ ನಂಬರಿಗೂ ಹೊಂದಾಣಿಕೆ ಇಲ್ಲಾ. ಯಾರದೋ ಹೊಲ ಇನಾರದೋ ಹೆಸರು ನಮೂದಾಗಿವೆ. ಇದರಿಂದ ಬೆಳೆ ನಷ್ಟ ಪರಿಹಾರ ಮತ್ತು ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ರೈತರು ಪರದಾಡುವಂತಾಗಿದೆ ಎಂದು ದೂರಿದರು.
ತೊಗರಿ ಹೆಸರು ನೋಂದಣಿಗೆ ಇದೇ ತಿಂಗಳು 14 ಕೊನೆ ದಿನದ ಗಡುವು ನೀಡಾಲಾಗಿದೆ. ನೋಂದಣಿ ಇಲ್ಲದೆ ತೊಗರಿ ಖರೀದಿಸುವಂತ್ತಿಲ್ಲ. ದೃಢೀಕರಣಕ್ಕಾಗಿ ಬೆಳೆ ಸಮೀಕ್ಷೆಯಲ್ಲಿ ತಪ್ಪಾಗಿರುವ ರೈತರ ಬೆಳೆ ತಿದ್ದುಪಡಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ತಿದ್ದುಪಡಿಗೆ ಕೆಲ ಷರತ್ತುಗಳನ್ನು ವಿಧಿಸಿರುವುದರಿಂದ ಬೇಗ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ರೈತರು ಆತಂಕಗೊಂಡಿದ್ದಾರೆ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಸೊಫೀಯಾ ಸುಲ್ತಾನ್ ರೈತರೊಂದಿಗೆ ಚರ್ಚಿಸಿ ಬಹಳಷ್ಟು ತಪ್ಪುಗಳಾಗಿವೆ. ತಿದ್ದುಪಡಿ ಜವಾಬ್ದಾರಿ ತಹಶೀಲ್ದಾರ್‌ಗೆ ವಹಿಸಲಾಗಿದೆ. ಗ್ರಾಮ ಲೆಕ್ಕಿಗರು ಸಮಸ್ಯೆ ಸರಿಪಡಿಸಿ ಜಿಪಿಆರ್‌ಎಸ್ ಮಾಡಿಕೊಟ್ಟರೆ ತಹಶೀಲ್ದಾರರು ತಮ್ಮ ಲಾಗಿನ್‌ನಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಿಐಟಿಯು ಮುಖಂಡ ದೇವಿಂದ್ರಪ್ಪ ಪತ್ತಾರ ರೈತ ಸಂಘದ ಮುಖಂಡರಾದ ವೆಂಕಟೇಶ ಮಾಲಿ ಪಾಟೀಲ, ಶಿವನಗೌಡ ಪೊಲೀಸ್ ಪಾಟೀಲ, ವೆಂಕೋಬ ದೊರೆ, ರಾಮು ನಾಯಕ ಕುಪಗಲ್ ಇದ್ದರು.