ಮಂಗಳೂರು/ಬಂಟ್ವಾಳ: ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ “ಸ್ಫೋಟಕ ಮಾಹಿತಿ’ ನೀಡುವುದಾಗಿ ಹೇಳಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಪೊಲೀಸರು ನೀಡಿದ ನೋಟಿಸಿಗೆ ಸ್ಪಂದಿಸಿ ಕಾನೂನು ತಜ್ಞರ ಮೂಲಕ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
“ಜು. 17ರಂದು 11 ಗಂಟೆಯೊಳಗೆ ಮಾಹಿತಿ ನೀಡುವಂತೆ ಪೊಲೀಸರು ನೋಟಿಸಿನಲ್ಲಿ ತಿಳಿಸಿದ್ದರು. ಅದರ ಪ್ರಕಾರ ನಮ್ಮಲ್ಲಿರುವ ಮಾಹಿತಿಯನ್ನು ಕಾನೂನು ತಜ್ಞರ ಮೂಲಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದೇವೆ’ ಎಂದು ಸ್ವಾಮೀಜಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
“ನಾಡಿದ್ದು (ಬುಧವಾರ) ನಮ್ಮ ಚಾತುರ್ಮಾಸ್ಯ ಆರಂಭವಾಗುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ನಾಳೆ (ಮಂಗಳವಾರ) ಪೂಜೆ, ಪುನಸ್ಕಾರ ಇತ್ಯಾದಿ ಪ್ರಕ್ರಿಯೆಗಳು ನಡೆಯಲಿದ್ದು, ಸೋಮವಾರ ಅದಕ್ಕೆ ಸಿದ್ಧತೆಗಳು ನಡೆದಿವೆ. ಆದ್ದರಿಂದ ಮಠವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಹಾಗಾಗಿ ಕಾನೂನು ತಜ್ಞರ ಮೂಲಕ ಉತ್ತರ ಕಳುಹಿಸಿದ್ದೇವೆ’ ಎಂದವರು ವಿವ ರಿಸಿ ದ್ದಾರೆ. “ತನಿಖೆ ಯಾವ ದಿಕ್ಕಿ ನಲ್ಲಿ ಸಾಗು ತ್ತದೆ ಎಂಬುದನ್ನು ನೋಡಿ ಕೊಂಡು ಮುಂದಿನ ಹೆಜ್ಜೆ ಇರಿಸುತ್ತೇವೆ’ ಎಂದಿದ್ದಾರೆ.
ಪ್ರಧಾನಿಗೆ ಪತ್ರ: ಈ ತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರು ಮತ್ತು ರಾಜಪಾಲರಿಗೆ ಪತ್ರವನ್ನು ಬರೆಯಲಾಗಿದೆ’ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಮಠದ ಲೆಟರ್‌ಹೆಡ್‌ನಲ್ಲಿ ಮಾಹಿತಿ
ಸ್ವಾಮೀಜಿಯವರ ನ್ಯಾಯವಾದಿ ಮಹೇಶ್ ಕಜೆ ಮತ್ತು ಸಹಾಯಕರು ಆಗಮಿಸಿ ಸಂಸ್ಥಾನದ ಲೆಟೆರ್‌ಹೆಡ್‌ನಲ್ಲಿ ಅಭಿಪ್ರಾಯ ನೀಡಿದ್ದಾರೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಎಂ.ಎಸ್. ಪ್ರಕಾಶ್ ತಿಳಿಸಿದ್ದಾರೆ. ಪತ್ರದಲ್ಲಿ ನೀಡಿರುವ ವಿವರಣೆಯಿಂದ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಇನ್ನೊಮ್ಮೆ ವಿವರಣೆ ಕೇಳಿ ನೋಟಿಸು ನೀಡಲಾಗುವುದು ಎಂದಿದ್ದಾರೆ.