Advertisement

ಹಿಂಗಾರು ಬಿತ್ತನೆ ಕಾರ್ಯದಲ್ಲಿ ಕೃಷಿಕರು

10:59 AM Oct 28, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮದಿಂದ ಮುಂಗಾರು ಬೆಳೆಯ ಹಾನಿ ಅನುಭವಿಸಿದ ರೈತರು ಇದೀಗ ಹಿಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ತಾಲೂಕಿನ ಐನಾಪುರ, ಸುಲೇಪೇಟ, ಕೋಡ್ಲಿ, ರಟಕಲ್‌, ನಿಡಗುಂದಾ, ಮಿರಿಯಾಣ, ಕುಂಚಾವರಂ, ವೆಂಕಟಾಪುರ, ಚಿಮ್ಮನಚೋಡ, ಗಡಿಕೇಶ್ವಾರ, ಕನಕಪುರ,ದೇಗಲಮಡಿ, ಸಾಲೇಬೀರನಳ್ಳಿ, ಹಸರಗುಂಡಗಿ, ಶಿರೋಳಿ, ಶಾದೀಪುರ, ನಾಗಾಇದಲಾಯಿ, ಚಂದನಕೇರಾ, ಗಡಿಲಿಂಗದಳ್ಳಿ, ಬಸಂತಪುರ ಗ್ರಾಮಗಳಲ್ಲಿ ಹಿಂಗಾರು ಜೋಳ, ಕಡಲೆ ಬೀಜಗಳನ್ನು ಬಿತ್ತನೆ ಮಾಡುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಆಗಿರುವುದರಿಂದ ಕೆಲವು ಹೊಲಗಳಲ್ಲಿ ಇನ್ನು ಮಳೆ ನೀರು ಹಾಗೇ ನಿಂತುಕೊಂಡಿದೆ. ಇನ್ನು ಭೂಮಿಗಳು ಬಿಸಿಲಿನಿಂದ ಆರಿಲ್ಲ, ಹೆಚ್ಚು ಮಳೆ ಆಗಿರುವುದರಿಂದ ಹೊಲಗಳಲ್ಲಿ ಹುಲುಸಾಗಿ ಹುಲ್ಲು ಬೆಳೆದಿದೆ. ಅದನ್ನು ಕೊಯ್ಯುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ತಗ್ಗು ಪ್ರದೇಶದ ಜಮೀನುಗಳು ಮಳೆ ನೀರಿನಿಂದ ಕೆಸರಾಗಿದ್ದು, ಬಿತ್ತನೆಗೆ ಬಾರದಂತಾಗಿವೆ.

ಇದನ್ನೂ ಓದಿ: ಎನ್‌ಇಪಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಜೋಳ, ಕಡಲೆ ಬೀಜಗಳನ್ನು ರೈತರು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಲಿದ್ದಾರೆ. ಏಕೆಂದರೆ ಮಳೆಯಿಂದಾಗಿ ಹೆಸರು, ಉದ್ದು, ಸೋಯಾಬಿನ್‌ ಬೆಳೆಗಳ ಹೂವು ಕಾಯಿ ಬಿಡುವ ಹಂತದಲ್ಲಿ ಮತ್ತು ಕಾಯಿ ರಾಶಿ ಮಾಡುವ ಸಂದರ್ಭದಲ್ಲಿ ಅತಿ ಹೆಚ್ಚಿನ ಮಳೆ ಸುರಿದ್ದರಿಂದ ರೈತರು ರಾಶಿ ಮಾಡದೇ ಹೊಲದಲ್ಲಿಯೇ ಬಿಟ್ಟಿದ್ದಾರೆ. ಹೀಗಾಗಿ ಹೆಚ್ಚು ಪ್ರದೇಶದಲ್ಲಿ ಜೋಳ, ಕಡಲೆ ಬಿತ್ತನೆ ಕಾರ್ಯ ನಡೆಯಲಿದೆ. ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಕಡಲೆ, ಜೋಳ ಮತ್ತು ರಸಗೊಬ್ಬರ ಖರೀದಿಸಿದ್ದಾರೆ.

Advertisement

ಐನಾಪುರ, ಚಿಂಚೋಳಿ, ಕೋಡ್ಲಿ, ಸುಲೇಪೇಟ, ಕುಂಚಾವರಂ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಸಂಗ್ರಹಣೆ ಮಾಡಿರುವುದರಿಂದ ರೈತರಿಗೆ ಯಾವುದೇ ಬೀಜದ ಕೊರತೆಯಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next