ಗಜೇಂದ್ರಗಡ: ಮುಂಗಾರು ಆರಂಭಕ್ಕೂ ಅಬ್ಬರಿಸಿದ್ದ ಮಳೆರಾಯ ಇದೀಗ ಮುನಿಸಿಕೊಂಡಿದ್ದಾನೆ. ತಾಲೂಕಿನಲ್ಲಿ ಈ ಬಾರಿ ಮತ್ತೆ ಮುಂಗಾರು ಮಳೆ ಕೈ ಕೊಡುವ ಭೀತಿ ಎದುರಾಗಿದ್ದು, ಒಂದು ತಿಂಗಳಿಂದ ಸಮರ್ಪಕ ಮಳೆಯಾಗದೇ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆದ ಬೆಳೆಗಳಿಗೆ ತೇವಾಂಶದ ಕೊರತೆಯಿಂದ ರೋಗಗಳು ಹೆಚ್ಚಾಗುತ್ತಿದೆ. ಮೇ ಅಂತ್ಯದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ರೈತರು ಸಂತಸಗೊಂಡು ಹೆಸರು, ಸಜ್ಜಿ, ಹೈಬ್ರಿಡ್ ಜೋಳ, ಗುರೆಳ್ಳು, ಯಳ್ಳು, ತೊಗರಿ ಬಿತ್ತಿದ್ದಾರೆ. ಆದರೆ ಬೆಳೆದು ನಿಂತ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿರುವುದನ್ನು ಕಂಡು ಅನ್ನದಾತ ಕಣ್ಣೀರು ಸುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಗೋವಿನ ಜೋಳ ಬಿತ್ತನೆ ಮಾಡುವ ಕೆಲ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಹಂಗಾಮಿನ ಅರ್ಧ ಮಳೆಗಳು ಮುಗಿದರೂ ವರುಣದೇವ ಕೃಪೆ ತೋರಿಲ್ಲ. ಮಳೆ ಬಂದ್ರೆ ಮಾತ್ರ ನಮ್ಮ ಬದುಕು, ಆ ದೇವರು ನಮ್ಮ ಮೇಲೆ ಕರುಣೆ ತೋರಬೇಕು. ಇಲ್ಲದಿದ್ದರೆ ನಮಗೆ ಸಾವೇ ಗತಿ ಎನ್ನುವುದು ರೈತರ ಸಾಮೂಹಿಕ ಅಳಲಾಗಿದೆ.
ಹೆಸರು ಬೆಳೆಗೆ ಹಳದಿ ರೋಗ: ಮೇ ತಿಂಗಳಲ್ಲಿ ಸುರಿದ ಮಳೆಗೆ ಹೆಸರು ಬಿತ್ತನೆ ಮಾಡಿದ ರೈತರು ಇನ್ನಿಲ್ಲದ ಸಮಸ್ಯೆಗೆ ಸಿಲುಕಿದ್ದಾರೆ. ತಾಲೂಕಿನಲ್ಲಿ 40 ಸಾವಿರಕ್ಕೂ ಅಧಿ ಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಫಸಲಿಗೆ ಹಳದಿ ರೋಗ ಬಂದಿದ್ದು, ಇಡೀ ಜಮೀನನ್ನೇ ಆವರಿಸಿಕೊಂಡಿದೆ. ಇದರಿಂದ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ. ಇನ್ನು ಮಳೆಯ ಕೊರತೆಯಿಂದ ಅಲ್ಪಸ್ವಲ್ಪ ಜೀವಂತವಿರುವ ಬೆಳೆ ಸಹ ಒಣಗುವ ಹಂತ ತಲುಪುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಎರಡು ವಾರಗಳಿಂದ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದೆ. ಆದರೆ ಮಳೆಯ ಬರುವಿಕೆ ಮಾತ್ರ ಇಲ್ಲದಂತಾಗಿದೆ. ತಂಪಾದ ಗಾಳಿ ಬೀಸುವ ಮೂಲಕ ಮೋಡಗಳು ಮುಂದು ಸರಿಯುತ್ತಿವೆ. ಇದೀಗ ಪುನರ್ವಸು ಮಳೆ ಮಾತ್ರ ರೈತರನ್ನು ಕೈ ಹಿಡಿಯಬೇಕಿದೆ. ಇಲ್ಲದಿದ್ದರೆ ಬೆಳೆಗಳು ಸಂಪೂರ್ಣ ನೆಲಕಚ್ಚಲಿವೆ.
ಸಾಮೂಹಿಕ ಪ್ರಾರ್ಥನೆ: ವರುಣ ಕೃಪೆಗಾಗಿ ಪ್ರಾರ್ಥಿಸಿ ತಾಲೂಕಿನ ರೈತ ಸಮೂಹ ದೀರ್ಘದಂಡ ನಮಸ್ಕಾರ, ಮುತ್ತೈದೆಯರಿಗೆ ಉಡಿ ತುಂಬುವುದು, ಭಜನೆ, ಗುರ್ಜಿ ಆಡುವುದು, ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳಿಗೆ ಮುಂದಾಗಿ ವರುಣನ ಕೃಪೆಗೆ ಮೊರೆ ಹೋಗಿದ್ದಾರೆ. ಹೀಗಾಗಿ ಎಲ್ಲರೂ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ಹೋಲದಾಗ ಬೆಳಿ ಚೊಲೋ ಇದ್ರ ಮಾತ್ರ ಯಾರಾದ್ರು ನಾಲ್ಕಾರು ರೂಪಾಯಿ ಕೊಡ್ತಾರ್ರೀ. ಬೆಳಿ ಬಾಡಿ ಹೋಗಕತೈತ್ರಿ, ಕೈಯಾಗ ರೊಕ್ಕ ಇಲ್ಲರ್ರಿ. ಖುಷಿ ಎಲ್ಲೇ ಇರತೈತ್ರೀ. ಮಳಿಯಪ್ಪ ಮಾತ್ರ ನಮ್ಮ ಕಷ್ಟ ಕೇಳೊವಲ್ರಿ.
-ಬಸಪ್ಪ ಮುದೇನಗುಡಿ, ರೈತ
ಮಳೆ ಅಭಾವದಿಂದ ತಾಲೂಕಿನಾದ್ಯಾಂತ ಈ ಬಾರಿ ಹೆಸರು ಫಸಲಿದೆ ಹಳದಿ ರೋಗ ಎದುರಾಗುತ್ತಿದೆ. ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಕ್ರೀಮಿನಾಶಕಗಳನ್ನು ಸಿಂಪಡನೆ ಮಾಡಬೇಕು.
-ರವೀಂದ್ರ ಪಾಟೀಲ, ತಾಲೂಕು ಸಹಾಯಕ ಕೃಷಿ ಅಧಿಕಾರಿ
–ಡಿ.ಜಿ. ಮೋಮಿನ್