ನಾರಾಯಣಪುರ: ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತಾಪಿ ವರ್ಗಕ್ಕೆ ಜೂನ್ ಮೊದಲ ವಾರ ಕಳೆದರೂ ನಿರೀಕ್ಷಿತ ಮಳೆಯಾಗುವ ಲಕ್ಷಣಗಳು ಗೋಚರಿಸದೇ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮುಂಗಾರು ಹಂಗಾಮಿಗಾಗಿ ಕೃಷಿ ಚಟುವಟಿಗಳು ಗರಿಗೆದರಬೇಕಾದರೆ ಪ್ರಸ್ತುತ ಮಳೆಯಾಗುವುದು ಅತ್ಯಂತ ಅವಶ್ಯವಿದೆ. ಈಗಾಗಲೇ ಮುಂಗಾರು ಪೂರ್ವ ಸುರಿದ ಮಳೆಯನ್ನು ನಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಕೊಡೇಕಲ್ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸೀಮಾಂತರ ಜಮೀನುಗಳಲ್ಲಿ ಕೆಲ ರೈತರೂ ಬಿತ್ತನೆ ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದರೆ, ಮತ್ತೊಂದಡೆ ಬಿತ್ತನೆಗಾಗಿ ಭೂಮಿ ಹದ ಮಾಡುವ ಸಿದ್ಧತೆಯಲ್ಲಿದ್ದಾರೆ. ಅದರಲ್ಲೆ ಕೆಲ ಕಡೆಗಳಲ್ಲಿ ರೈತರೂ ಸಜ್ಜೆ, ತೊಗರಿ ಇತರೆ ಧಾನ್ಯದ ಬೀಜಗಳ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಳೆಯ ನಿರೀಕ್ಷೆಯಲ್ಲಿ ರೈತರು
ಕೃಷ್ಣಾ ಅಚ್ಚುಕಟ್ಟು ಭಾಗದ ರೈತರು ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆಗಾಗಿ ಕಾಲುವೆ ನೀರನ್ನೇ ನಂಬಿದ್ದಾರೆ. ಆದರೆ ಕೃಷ್ಣಾ ಜಲಾನಯನ ಪ್ರದೇಶ, ಕೃಷ್ಣಾ ನದಿಯಯಲ್ಲಿ ನೀರಿನ ಹರಿವು ಹೆಚ್ಚಾಗಿ ಬೃಹತ್ ನೀರಾವರಿ ಯೋಜನೆಗಾಗಿ ಕೃಷ್ಣೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆಲಮಟ್ಟಿ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರ ಬಸವಸಾಗರ ಉಭಯ ಜಲಾಶಯಗಳಿಗೆ ಗರಿಷ್ಠ ಪ್ರಮಾಣದ ಒಳ ಹರಿವು ಆರಂಭವಾಗಬೇಕು. ಜಲಾಶಯಗಳು ಸಂಪೂರ್ಣ ಭರ್ತಿಯಾದರೆ ಮುಂಗಾರು ಹಂಗಾಮಿನ ಬೆಳೆಗೆ ಕಾಲುವೆ ನೀರು ಬಿಡಲಾಗುತ್ತದೆ. ಹೀಗಾಗಿ ಖುಷ್ಕಿ ಹಾಗೂ ನೀರಾವರಿ ರೈತರು ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಈಗಿನ ದಿನದ ವಾತಾವರಣವೂ ಕೂಡ ಒಣ ಗಾಳಿ ಬೀಸುತ್ತಿದ್ದು, ಮುಂಬರುವ ದಿನಗಳಲ್ಲಾದರೂ ಮುಂಗಾರು ಚುರುಕು ಪಡೆದು ಬದಲಾದ ಸಂದರ್ಭದಲ್ಲಿ ಮಳೆಗೆ ಪೂರಕವಾದ ಮಾರುತಗಳು ಬೀಸಿ ಮೋಡಗಳನ್ನು ಹೊತ್ತು ತಂದು ನಿರೀಕ್ಷಿತ ಮಳೆ ಸುರಿದರೆ ಮಾತ್ರ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದು.