Advertisement

ನೆರೆ ಹಾನಿಯಿಂದ ಅಪಾರ ನಷ್ಟ ; ಹೆಚ್ಚುವರಿ ಪರಿಹಾರ ನಿರೀಕ್ಷೆಯಲ್ಲಿ ರೈತರು

11:04 PM Oct 13, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ-ನೆರೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸುಮಾರು 65.59 ಹೆಕ್ಟೇರ್‌ಗಳಷ್ಟು ಕೃಷಿ ಬೆಳೆ ಹಾಗೂ 22.66 ಹೆಕ್ಟೇರ್‌ಗಳಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಒಟ್ಟು 26.46 ಲ.ರೂ.ನಷ್ಟ ಉಂಟಾಗಿದೆ. ನಷ್ಟದ ದಾಖಲೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಪರಿಹಾರ ವಿತರಣೆ ನಡೆಯಲಿದೆ.

Advertisement

ತೋಟಗಾರಿಕೆ ಬೆಳೆಗಳು ಹಾಗೂ ಕೃಷಿ ಬೆಳೆಗಳಿಗೆ ಪರಿಹಾರ ಮೊತ್ತ ಭಿನ್ನವಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಹೆಕ್ಟೇರ್‌ಗೆ 18 ಸಾವಿರ ರೂ. ಹಾಗೂ ಕೃಷಿ ಬೆಳೆಗಳಿಗೆ ಹೆಕ್ಟೇರ್‌ಗೆ 6,800 ರೂ.ಪರಿಹಾರ ಲಭಿಸುತ್ತದೆ. ಆದರೆ ಈ ಪ್ರಮಾಣದ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ ಎನ್ನುತ್ತಾರೆ ಕೃಷಿಕರು.

ಸಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ವಿಪರೀತ ಮಳೆಯಿಂದ ಉಂಟಾದ ನೆರೆ ಹಾವಳಿ ಜಿಲ್ಲೆಯಲ್ಲಿ ಭತ್ತ ಕೃಷಿ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ತೆನೆ ತುಂಬಿಕೊಳ್ಳುತ್ತಿರುವ ಹೊತ್ತಲ್ಲೆ ಬಂದ ನೆರೆಯಿಂದ ಭತ್ತ ಸಣ್ತೀ ಕಳೆದುಕೊಂಡು ಜೊಳ್ಳು ಮಾತ್ರ ಉಳಿದು ಕೃಷಿಕರಿಗೆ ಬಹಳ ನಷ್ಟವಾಗಿದೆ. ಕೃಷಿ ನಷ್ಟಕ್ಕೊಳಗಾದ ರೈತರಿಗೆ ಎಕರೆಗೆ ಕನಿಷ್ಠ ಹತ್ತು ಸಾವಿರ ರೂ. ಗಳ ಪರಿಹಾರ ನೀಡಬೇಕು. ಇದಲ್ಲದೆ ಭತ್ತ ಕಟಾವು ಆರಂಭಗೊಳ್ಳುತ್ತಿರುವ ಈ ಹೊತ್ತಲ್ಲೇ ರೈತರಿಗೆ ಚೇತರಿಕೆ ನೀಡಲು ಬೆಂಬಲ ಬೆಲೆ ಘೋಷಣೆ ಮಾಡಿ ಭತ್ತ ಖರೀದಿ ಅತಿ ಶೀಘ್ರದಲ್ಲಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾ ಕೃಷಿಕ ಸಂಘವು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

ಭಾಗಶಃ ಹಾನಿಯಾದವರಿಗೆ ಬಲು ತೊಂದರೆ
ಕೃಷಿ ಬೆಳೆಯಲ್ಲಿ ಭಾಗಶಃ ಹಾನಿ ಯಾದವರ ಪ್ರಮಾಣ ಅಧಿಕವಿದೆ. ಇದಕ್ಕೆ ಪರಿಹಾರದ ಪ್ರಮಾಣವನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ನಿರ್ಧರಿಸಲಿದ್ದಾರೆ.  ಪರಿಶೀಲನೆ ಕೆಲಸ ನಡೆದಿದ್ದು, ಪರಿಹಾರ ಪಾವತಿ ಮಾತ್ರ ಬಾಕಿ ಇದೆ. ಭಾಗಶಃ ಹಾನಿಯಾದವರಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು.

ಮಟ್ಟುಗುಳ್ಳ: 3.44 ಲ.ರೂ. ನಷ್ಟ
ಮಟ್ಟುಗುಳ್ಳ ಬೆಳೆ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಇದರಿಂದ ಈ ಬೆಳೆ ಹಾನಿ ಪರಿಹಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಲಾಗಿದೆ. ಒಟ್ಟು 6.68 ಹೆಕ್ಟೇರ್‌ ಮಟ್ಟುಗುಳ್ಳ ಬೆಳೆ ನಾಶವಾಗಿದ್ದು, 3.44 ಲ.ರೂ.ನಷ್ಟ ಉಂಟಾಗಿದೆ.

Advertisement

ಪರಿಹಾರ ಮೊತ್ತ ಫ‌ಲಾನುಭವಿಗಳ ಖಾತೆಗೆ ಜಮೆ
ಕೃಷಿ ಹಾಗೂ ತೋಟಗಾರಿಗೆ ಬೆಳೆ ನಾಶವಾದವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಕಳುಹಿಸಿಕೊಡಲಾಗಿದ್ದು, ಪರಿಹಾರದ ಮೊತ್ತ ಫ‌ಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ.
-ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಹೆಚ್ಚಿನ ನೆರವು ಅಗತ್ಯ
ನೆರೆ ಪರಿಹಾರದಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿಕರಿಗೆ ನಷ್ಟ ಉಂಟಾಗಿದೆ. ಕೃಷಿಕರಿಗೆ ಈಗ ನಿಗದಿಪಡಿಸಿರುವ ವೇತನ ಅಲ್ಪಪ್ರಮಾಣದ್ದಾಗಿದೆ. ಸರಕಾರ ಮತ್ತಷ್ಟು ಹೆಚ್ಚು ನೆರವು ನೀಡಿ ಕೃಷಿಕರಿಗೆ ಆಸರೆಯಾಗಬೇಕಿದೆ.
-ಕುದಿ ಶ್ರೀನಿವಾಸ ಭಟ್‌, ಕೃಷಿಕರು

ನಾಶವಾದ ಬೆಳೆಗಳು
ಬೆಳೆ                  ಹೆಕ್ಟೇರ್‌ಗಳಲ್ಲಿ
ಅಡಕೆ                     12.6
ತೆಂಗು                    3.68
ಪೈನಾಪಲ್‌             2.8
ಬಾಳೆ                     1.91
ಮಟ್ಟುಗುಳ್ಳ             6.68

Advertisement

Udayavani is now on Telegram. Click here to join our channel and stay updated with the latest news.

Next