Advertisement

ರೈತರ ಜಮೀನಿಗೆ ಸೂಕ್ತ ಪರಿಹಾರ ಅಗತ್ಯ

09:33 PM Aug 29, 2019 | Lakshmi GovindaRaj |

ದೇವನಹಳ್ಳಿ: ಸುಮಾರು ವರ್ಷಗಳಿಂದ ಹಳ್ಳಿಯಲ್ಲಿ ವಾಸವಾಗಿರವ ಗ್ರಾಮಸ್ಥರಿಗೆ ಕೇವಲ ಅರ್ಧ ಎಕರೆ ಜಮೀನು ಹಾಗೂ ಮನೆ ಮಾತ್ರ ಇದ್ದು, ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಪಡೆಯುವ ಭೂಮಿ ಹಾಗೂ ಮನೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ. ಶ್ರೀ ನಿವಾಸಗೌಡ ಒತ್ತಾಯಿಸಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದ ಸಾಯಿಬಾಬಾ ಜ್ಞಾನ ಮಂದಿರದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ರಸ್ತೆ ನಿರ್ಮಾಣದ ಪ್ರಸ್ತಾಪಿತ ಭೂ ಮಾಲೀಕರು ಹಾಗೂ ಫ‌ಲಾನುಭವಿಗಳ ಸಭೆಯಲ್ಲಿ ಮಾತನಾಡಿದರು.

ಈ ಭಾಗದ ಸಾಕಷ್ಟು ರೈತರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿ, ಇರುವ ತುಂಡು ಭೂಮಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಂಚರಿಸಲು ವಿಶಾಲವಾದ ರಸ್ತೆಯಾಗಬೇಕಾಗಿರುವ ಕಾರಣ ಸರ್ಕಾರ, ಅಲ್ಪ ಭೂಮಿ ಹೊಂದಿರುವ ರೈತರನ್ನು ಗುರ್ತಿಸಿ ಪ್ರಸ್ತಾವನೆ ಸಿದ್ದಪಡಿಸಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ನೀಡಿದ ನಂತರವೇ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮನೆಗಳನ್ನು ಉಳಿಸಲು ಬೈಪಾಸ್‌ ರಸ್ತೆ: ಇಲಾಖೆಯ ವ್ಯವಸ್ಥಾಪಕ ರಮೇಶ್‌ರಾವ್‌ ಮಾತನಾಡಿ, ಬೂದಿಗೆರೆ ಕ್ರಾಸ್‌ನಿಂದ ಕೆಂಪೇಗೌಡ ಅಂತಾ ರಾಷ್ಟ್ರೀrಯ ವಿಮಾನ ನಿಲ್ದಾಣದವರೆಗೂ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಸರ್ಕಾರದಿಂದ ಅದೇಶವಾಗಿದೆ. ಬೂದಿಗೆರೆ ಗ್ರಾಮದಲ್ಲಿ 7 ಮೀಟರ್‌ ರಸ್ತೆ ಲಭ್ಯವಿದ್ದು, ರಸ್ತೆ ಅಗಲೀಕರಣಕ್ಕಾಗಿ 30 ಮೀಟರ್‌ ಜಾಗ ಅಗತ್ಯವಿದೆ. ರಸ್ತೆ ನಿರ್ಮಾಣಕ್ಕೆ 10 ಎಕರೆ ಭೂಮಿಬೇಕಾಗಿದೆ. ಈಗ ಗುರ್ತಿಸಿರುವ ಜಾಗದ ಪೈಕಿ ಶೇ 75 ರಷ್ಟು ವಾಸದ ಮನೆಗಳಿವೆ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಬೂದಿಗೆರೆ ಗ್ರಾಮದ ಪಕ್ಕದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲು ಸರ್ವೆ ಕೈಗೊಂಡಿದೆ. ಅದರಲ್ಲಿ 4 ಮನೆಗಳಿದ್ದು, 7 ಎಕರೆ ಭೂಮಿ ಅಗತ್ಯವಿದೆ ರೈತರು ಸಹಕರಿಸಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ರಮ್ಯಾ ಮಾತನಾಡಿ, ಬೂದಿಗೆರೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿರುವ ಕಾರಣ ನಿಮ್ಮ ಅಭಿಪ್ರಾಯ, ಸಮಸ್ಯೆಗಳನ್ನು ತಿಳಿಸಿದರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.

Advertisement

ಭೂ ಸ್ವಾಧೀನ ತಹಶೀಲ್ದಾರ್‌ ರಂಗಸ್ವಾಮಿ, ತಾಪಂ ಸದಸ್ಯೆ ಭಾರತಿ, ಕೆಆರ್‌ಡಿಸಿಎಲ್‌ ವಿಶೇಷ ಭೂ ಸ್ವಾಧೀನಾಧಿಕಾರಿ ಟಿ.ಆರ್‌.ಶೋಭಾ, ಎಇಇ ರವಿಕುಮಾರ್‌, ಗ್ರಾಪಂ ಸದಸ್ಯ ಮುರಳಿ, ಶಿಕ್ಷಕ ವೆಂಕಟಪತಿ, ಪಿಡಿಒ ರಾಜಗೋಪಾಲರೆಡ್ಡಿ, ಕಾರ್ಯದರ್ಶಿ ಲಕ್ಷ್ಮೀಪತಿ ಇದ್ದರು.

ಸರ್ಕಾರದಿಂದ ಕೊಟ್ಟಿರುವ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ. ಮನೆ ಇರುವ ಜಾಗವನ್ನು ರಸ್ತೆಗೆ ತೆಗೆದುಕೊಂಡರೆ ಪುನಃ ಮನೆ ನಿರ್ಮಾಣ ಮಾಡಿಕೊಳ್ಳಲಿಕ್ಕೆ ಶಕ್ತಿಯಿಲ್ಲ ಆದ್ದರಿಂದ ನಮ್ಮ ಮನೆಯನ್ನು ಕೆಡವಬೇಡಿ.
-ಗೌರಮ್ಮ, ಗ್ರಾಮಸ್ಥೆ

ರೈತರು ತಮಗಿರುವ ತುಂಡು ಭೂಮಿಯಲ್ಲೆ ಬೆಳೆ ಬೆಳೆದು ಜೀವನ ರೂಪಿಸಿಕೊಂಡಿದ್ದಾರೆ. ಈಗ ಈ ಭೂಮಿ ರಸ್ತೆ ನಿರ್ಮಾಣಕ್ಕೆ ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಮೊದಲು ರೈತರ ಭೂಮಿಗೆ ಸೂಕ್ತವಾದ ಬೆಲೆ ನೀಡದೆ ಸ್ವಾಧೀನಕ್ಕೆ ಮುಂದಾದರೆ ನಾವು ಹೋರಾಟಕ್ಕಿಳಿಯಬೇಕಾಗಿರುವುದು ಅನಿವಾರ್ಯ.
-ಬಿ.ಎನ್‌.ಪದ್ಮನಾಭ್‌, ರೈತ‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next