ಬ್ಯಾಡಗಿ: ತಾಲೂಕಿನ ವಿವಿಧೆಡೆ ಗೋವಿನಜೋಳಕ್ಕೆ ಸೈನಿಕಹುಳು (ಫಾಲ್ ಆರ್ಮಿ ವರ್ಮ) ಲಗ್ಗೆಯಿಟ್ಟಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದ್ದು, ಈ ಕೀಟಬಾಧೆ ಇಡೀ ತಾಲೂಕಿಗೆ ವ್ಯಾಪಿಸುವ ಭೀತಿ ಎದುರಾಗಿದೆ.
ನಿಯಂತ್ರಣವಾಗದಿದ್ದರೆ ದೊಡ್ಡ ಪೆಟ್ಟು: ಈ ಕೀಟಬಾಧೆ ಕಳೆದ ವರ್ಷ ಮೋಟೆಬೆನ್ನೂರ ಭಾಗದಲ್ಲಿ ಕಂಡು ಬಂದಿದ್ದು, ಪ್ರಸಕ್ತ ವರ್ಷವೂ ಅದೇ ಭಾಗದಿಂದ ಆರಂಭವಾಗಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಮಳೆ ಅನಿಶ್ಚಿತತೆ ನಡುವೆಯೇ ತಾಲೂಕಿನಲ್ಲಿ ಸುಮಾರು 21 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆ ಯಾಗಿದ್ದು, ಕೀಟಬಾಧೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ ರೈತ ಸಮೂಹಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮೂರ್‍ನಾಲ್ಕು ಜಿಲ್ಲೆಗಳಲ್ಲಿ ಪ್ರತ್ಯಕ್ಷ: ಸೈನಿಕ ಹುಳುಗಳ ಸಂಖ್ಯೆ ಇದೀಗ ಹೆಚ್ಚಾಗಿದ್ದು, ಕೇವಲ ಹಾವೇರಿಯಷ್ಟೇ ಅಲ್ಲ ಧಾರವಾಡ, ದಾವಣಗೆರೆ ಜಿಲ್ಲೆಗಳಿಗೂ ವ್ಯಾಪಿಸಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಕೀಟ ಕೇವಲ ಬೆಳೆಯನ್ನಷ್ಟೇ ಅಲ್ಲ; ಅದರ ಜೊತೆಗೆ ದಂಟನ್ನೂ ಬಿಡದಂತೆ ತಿಂದು ನಾಶಪಡಿಸುತ್ತದೆ. ಹೀಗಾಗಿ ಈ ಮೊದಲು ಲದ್ದಿ ಹುಳು ಎಂದು ಕರೆಯಲಾಗುತ್ತಿದ್ದ ಇದನ್ನು ಈಚೆಗೆ ಸೈನಿಕ ಹುಳು ಎಂದು ಕರೆಯಲಾಗುತ್ತಿದೆ.
ನಿಯಂತ್ರಣಕ್ಕೆ ತರಲು ಎಡವಟ್ಟು: ಕಷ್ಟಪಟ್ಟು ಹುಳುಬಾಧೆ ನಿಯಂತ್ರಣಕ್ಕೆ ತರಬಹುದಾಗಿದ್ದರೂ, ತಾಲೂಕಿನಾದ್ಯಂತ ನಿರಂತರ ಬೀಳುತ್ತಿರುವ ಮಳೆಯಿಂದ ಭೂಮಿಯೊಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವುಗಳನ್ನು ಪತ್ತೆ ಹಚ್ಚುವ ಅಥವಾ ನಾಶಪಡಿಸುವ ಕಾರ್ಯಕ್ಕೆ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸಕ್ತ ವರ್ಷ ಇಲ್ಲಿವರೆಗೂ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇಲ್ಲದಿದ್ದರೆ ಸೈನಿಕಹುಳುಗಳು ಮಳೆ ನೀರಿನಲ್ಲಿ ಹರಿದು ಹೋಗುತ್ತಿದ್ದವು ಎಂಬ ಮಾತು ಕೂಡ ರೈತರಿಂದ ಕೇಳಿ ಬರುತ್ತಿದೆ.
ಕೃಷಿ ತಜ್ಞರ ತಂಡ ಭೇಟಿ-ಪರಿಶೀಲನೆ: ಸಹಾಯಕ ಕೃಷಿ ನಿರ್ದೇಶಕ ಅಮೃತೇಶ ಹಾಗೂ ಜಿ.ಎಸ್. ಸ್ಪೂರ್ತಿ ಹಾಗೂ ಕೃಷಿ ಅಧಿಕಾರಿ ಮಂಜುನಾಥ ನೇತೃತ್ವದ ಕೃಷಿ ಅಧಿಕಾರಿಗಳ ತಂಡ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿತು. ಸೈನಿಕ ಹುಳು ಬೂದು ಮತ್ತು ಕಂದು ಬಣ್ಣದ್ದಾಗಿದ್ದು, 17 ರಿಂದ 21 ದಿನ ಜೀವಂತವಾಗಿರಲಿದೆ. ಹೆಣ್ಣು ಜಾತಿಯ ಕೀಟ ಪ್ರತಿ ಬಾರಿ ಸುಮಾರು 1500 ರಿಂದ 2000 ಸಾವಿರ ಮೊಟ್ಟೆಗಳನ್ನು ಗುಂಪಾಗಿ ಇಡಲಿದೆ. ಎರಡ್ಮೂರು ದಿನಗಳಲ್ಲಿ ಮೊಟ್ಟೆಯಿಂದ ಹೊರಬರುವ ಮರಿ ಕಪ್ಪು ಬಣ್ಣದ ತಲೆ ಹೊಂದಿದ್ದು, ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತದೆ. ಮೊದಲು ಎಲೆ ತಿನ್ನುವ ಹುಳುಗಳು ನಂತರ ಸುಳಿಯಲ್ಲಿ ಸಣ್ಣ ರಂಧ್ರ ಮಾಡಿಕೊಂಡು ಕಾಂಡ ಕೊರೆಯಲು ಪ್ರಾರಂಭಿಸುತ್ತವೆ ಎಂದು ಪರಿಶೀಲನಾ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.