Advertisement

ಬೆಸ್ಕಾಂನಿಂದ ರೈತರ ಸುಲಿಗೆ

05:52 AM Feb 26, 2019 | |

ಹರಿಹರ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ, ಟಿಸಿ (ಪರಿವರ್ತಕ) ಮತ್ತಿತರೆ ಪರಿಕರ ಒದಗಿಸುವಾಗ ಬೆಸ್ಕಾಂ ಅಧಿಕಾರಿಗಳು ರೈತರ ಸುಲಿಗೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ ಎಂದು ಶಾಸಕ ಎಸ್‌.ರಾಮಪ್ಪ ಕಿಡಿಕಾರಿದರು.

Advertisement

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾಗಿ ಮಳೆ-ಬೆಳೆ ಇಲ್ಲದೆ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಕಾಪಾಡಿಕೊಳ್ಳಲು ವಿದ್ಯುತ್‌ ಸಂಪರ್ಕಕ್ಕೋ, ಟಿಸಿಗಾಗಿಯೋ ನಿಮ್ಮಲ್ಲಿಗೆ ಓಡೋಡಿ ಬರುವ ರೈತರ ತುರ್ತು ಅಗತ್ಯವನ್ನೆ ಬಂಡವಾಳ ಮಾಡಿಕೊಂಡು ಅವರಿಂದ ಹಣ ಪೀಕುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಹೊಸದಾಗಿ ವಿದ್ಯುತ್‌ ಸಂಪರ್ಕ ನೀಡಲು 50 ಸಾವಿರ ರೂ., ಅಕ್ರಮ-ಸಕ್ರಮ ಯೋಜನೆಯಡಿ ಸಂಪರ್ಕಕ್ಕೆ 20ರಿಂದ 50 ಸಾವಿರ ಹಣ ವಸೂಲಿ ಮಾಡುತ್ತಿದ್ದೀರೆಂದು ದೂರುಗಳು ಬರುತ್ತಿವೆ. ಸರ್ಕಾರ ನೀಡಿರುವ ಯೋಜನೆಯ ಲಾಭ ಫಲಾನುಭವಿ ರೈತರಿಗೆ ತಲುಪಿಸಲು ನಿಮಗೇಕೆ ಹಣ ನೀಡಬೇಕು. ಸರ್ಕಾರ ನಿಮಗೆ ಸಂಬಳ, ಸವಲತ್ತು ನೀಡುತ್ತಿಲ್ಲವೆ? ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಇಇ ಸಿ.ಎನ್‌.ರಮೇಶ್‌ ಹಾಗೂ ಇಂಜಿನಿಯರ್‌ ಕರಿಬಸಯ್ಯ, ಅಕ್ರಮ, ಸಕ್ರಮಕ್ಕೆ ಸರ್ಕಾರ ನಿಗದಿಗೊಳಿಸಿದ ಶುಲ್ಕವನ್ನಷ್ಟೆ ಪಡೆಯಲಾಗುತ್ತಿದೆ. ಉಳಿದಂತೆ ಟಿಸಿ, ಮತ್ತಿತರೆ ಪರಿಕರಗಳಿಗೆ ರೈತರಿಂದ ಯಾವುದೇ ಹಣ ಪಡೆಯುತ್ತಿಲ್ಲ. ನಿಯಮ ಬಾಹಿರವಾಗಿ ರೈತರಿಂದ ಏನಾದರೂ ಹಣ ವಸೂಲಿ ಮಾಡಿದ್ದರೆ ನಮ್ಮ ಮೇಲೆ ಕ್ರಮ ಜರುಗಿಸಬಹುದು. ಆಗ ಶಾಸಕರು, ಈ ಬಗ್ಗೆ ಸಾಕಷ್ಟು ರೈತರು ನನ್ನ ಬಳಿ ದೂರಿದ್ದಾರೆ. ಇದು ಹೀಗೇ ಮುಂದುವರಿದರೆ ಸಹಿಸುವುದಿಲ್ಲ ಎಂದರು.

ಕಳಪೆ ಪರಿಕರ: ತಾಲೂಕಿನಲ್ಲಿ ಬೆಸ್ಕಾಂ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಗುತ್ತಿಗೆದಾರರು ಅಳವಡಿಸುವ ವಿದ್ಯುತ್‌ ಪರಿಕರಗಳು ಕಳಪೆಯಾಗಿವೆ. ಈ ಪರಿಕರಗಳನ್ನು ಒದಗಿಸುವವರು ಯಾರು, ಅಳವಡಿಸುವವರು ಯಾರು, ನೀವು ಗುಣಮಟ್ಟ ಪರಿಶೀಲಿಸುವುದಿಲ್ಲವೇ? ಎಂದು ಇಇ
ವಿಜಯಲಕ್ಷ್ಮೀಯವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮೀ, ಗುತ್ತಿಗೆದಾರರ ಟೆಂಡರ್‌ ಪ್ರಕ್ರಿಯೆ ಕಂಪನಿ ಮಟ್ಟದಲ್ಲಿ ನಡೆಯುತ್ತದೆ. ಹರಿಹರ, ಹೊನ್ನಾಳಿ, ಹರಪನಹಳ್ಳಿ ತಾಲೂಕುಗಳ ಪರಿಕರ ಸರಬರಾಜಿಗೆ 50 ಕೋಟಿ ರೂ. ಟೆಂಡರ್‌ ಆಗಿದ್ದು, ಎರಡು ವರ್ಷಗಳಿಂದ ಆ ಗುತ್ತಿಗೆದಾರರು 15 ತಂಡಗಳಲ್ಲಿ ಕೆಲಸ ಮಾಡುತ್ತಿದ್ದು, 3334 ಕಾಮಗಾರಿ ವಹಿಸಲಾಗಿದೆ. ತಾಲೂಕಿನ 778 ಕಾಮಗಾರಿಗಳ ಪೈಕಿ 528 ಮುಗಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಒತ್ತಡ ಹೇರುತ್ತಿದ್ದೇವೆ ಎಂದರು.

ಕುಡಿಯುವ ನೀರಿನ ಕೊಳವೆಬಾವಿಗಳ ವಿದ್ಯುತ್‌ ಸಂಪರ್ಕಕ್ಕೂ ತಿಂಗಳುಗಟ್ಟಲೆ ಅಲೆದಾಡಿಸಬೇಡಿ. ಯಲವಟ್ಟಿ ಗ್ರಾಮದಲ್ಲಿ ಕೊಳವೆಬಾವಿಗೆ ಮೂರು ತಿಂಗಳಿಂದ ವಿದ್ಯುತ್‌ ಸಂಪರ್ಕ ಕೊಟ್ಟಿಲ್ಲ ಎಂಬ ಆರೋಪವಿದೆ. ಕೂಡಲೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಬೇಸಿಗೆಯಲ್ಲಿ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ನಂತರ ಪಿಡಿಒಗಳ ಪ್ರಗತಿ ಪರಿಶೀಲನೆಯಲ್ಲಿ ಉದ್ಯೋಗ ಖಾತ್ರಿ, ಬಸವ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ತಾಪಂ ಇಒ ಅನಂತರಾಜ್‌, ರಾಘವೇಂದ್ರ, ವಿವಿಧ ಇಲಾಖೆ ಅಧಿಕಾರಿಗಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next