Advertisement

ಭತ್ತ ಕೊಳ್ಳೋರಿಲ್ಲ…ಗೋಳು ಕೇಳ್ಳೋರಿಲ್ಲ!

07:52 PM Nov 14, 2020 | Suhan S |

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ತುಂಗಭದ್ರಾ, ಎಲ್‌ಎಲ್‌ಸಿ ಕಾಲುವೆ, ತುಂಗಭದ್ರಾ, ವೇದಾವತಿ ಹಗರಿ ನದಿ, ದೊಡ್ಡಹಳ್ಳ, ಗರ್ಜಿಹಳ್ಳ, ಕೆಂಚಿಹಳ್ಳ ಮತ್ತು ಬೋರ್‌ವೆಲ್‌ ನೀರಿನ ಸೌಲಭ್ಯ ಹೊಂದಿರುವ ರೈತರು ತಾಲೂಕಿನಾದ್ಯಂತ ಸುಮಾರು 31 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಸೋನಾಮಸೂರಿ, ಆರ್‌ಎನ್‌ಆರ್‌64, ನೆಲ್ಲೂರು ಸೋನಾ ತಳಿಯ ಭತ್ತ ನಾಟಿಮಾಡಿದ್ದು, ಭತ್ತದ ಬೆಳೆ ಈಗ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿರುವುದು ಮತ್ತು ಭತ್ತ ಖರೀದಿಗೆ ವ್ಯಾಪಾರಿಗಳು ಬಾರದೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

Advertisement

ಈಗಾಗಲೇ ಶೇ. 35ರಷ್ಟು ಭತ್ತ ಕೊಯ್ಲು ಕಾರ್ಯ ಮುಗಿದಿದ್ದು, ರೈತರು ಕೊಯ್ಲು ಮಾಡಿದ ಭತ್ತವನ್ನು ರಾಶಿ ಹಾಕಿಕೊಂಡು ಖರೀದಿಸುವ ವ್ಯಾಪಾರಿಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ವ್ಯಾಪಾರಿಗಳು ಭತ್ತವನ್ನು ಖರೀದಿ ಮಾಡುತ್ತಿರುವುದರಿಂದ ರೈತರ ಗದ್ದೆಗಳಲ್ಲಿ ಭತ್ತದ ರಾಶಿಗಳು ಹೆಚ್ಚಾಗಿ ಕಂಡುಬರುತ್ತಿವೆ. ರೈತರು ಒಂದು ಎಕರೆ ಭತ್ತದ ಗದ್ದೆಗೆ ಸುಮಾರು 25 ಸಾವಿರದಿಂದ 30 ಸಾವಿರ ರೂ. ಖರ್ಚುಮಾಡಿದ್ದು, ಇಳುವರಿಯೂ ಕಡಿಮೆಯಾಗಿರುವುದರಿಂದ ಮತ್ತು ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಕಳೆದ ವರ್ಷ ಆರ್‌ಎನ್‌ಆರ್‌ ಭತ್ತಕ್ಕೆ ರೂ.1800, ಸೋನಾ ಮಸೂರಿ ರೂ.1850, ನೆಲ್ಲೂರು ಸೋನಾ ರೂ.1600 ಬೆಲೆಯಲ್ಲಿ ಮಾರಾಟವಾಗಿತ್ತು. ರೈತರ ಹೊಲಗಳಿಗೆ ತೆರಳಿ

ವ್ಯಾಪಾರಿಗಳು ಭತ್ತ ಖರೀದಿ ಮಾಡಿದ್ದರು. ಆದರೆ ಈ ವರ್ಷ ತಾಲೂಕಿನಲ್ಲಿ ಶೇ. 35ರಷ್ಟು ರೈತರು ಭತ್ತಕೊಯ್ಲು ಮಾಡಿದ್ದು ಆರ್‌.ಎನ್‌.ಆರ್‌. ಕ್ವಿಂಟಲ್‌ ಗೆ ರೂ. 1750, ಸೋನಾ ರೂ. 1450-1500, ನೆಲ್ಲೂರು ಸೋನಾ ರೂ.1280-1300ಕ್ಕೆ ಬೆಲೆಗೆ ಮಾರಾಟ ಮಾಡಲು ರೈತರು ಮುಂದಾಗಿದ್ದರೂ ಕೊಳ್ಳಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ.

ತಾಲೂಕಿಗೆ ಭತ್ತ ಖರೀದಿಸಲು ಪ್ರತಿವರ್ಷ ತಮಿಳುನಾಡು, ಗಂಗಾವತಿ, ಸಿಂಧನೂರು, ಕಾರಟಗಿ, ತುಮಕೂರು, ಬಳ್ಳಾರಿ, ಸಿರಗುಪ್ಪ ಮುಂತಾದ ಕಡೆಗಳಿಂದ ಭತ್ತವನ್ನು ಖರೀದಿಸಲು ವ್ಯಾಪಾರಸ್ಥರು ಬರುತ್ತಿದ್ದರು. ಆದರೆ ಈ ವರ್ಷ ಕೇವಲ ಬೆರಳೆಣಿಕೆಯಷ್ಟು ಸ್ಥಳೀಯ ವ್ಯಾಪಾರಿಗಳು ಮಾತ್ರ ಭತ್ತದ ಖರೀದಿಗೆ ಮುಂದೆ ಬಂದಿದ್ದಾರೆ. ಇದರಿಂದ ಭತ್ತಕ್ಕೆ ಬೆಲೆ ಇಲ್ಲದಂತಾಗಿದೆ.

ಪ್ರತಿವರ್ಷ ಸೋನಾಮಸೂರಿ ಅಕ್ಕಿಯೂ ಬೆಂಗಳೂರು, ಮೈಸೂರು, ಹಾಸನ ಹಾಗೂ ನೆಲ್ಲೂರು ಸೋನಾ ಅಕ್ಕಿಯು ಶೇ. 70ರಷ್ಟು ತಮಿಳುನಾಡು, ಕೇರಳ, ಮುಂಬೈನಲ್ಲಿ ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಬೇಡಿಕೆಯಿಲ್ಲದೇ ಇರುವುದರಿಂದ ಭತ್ತ ಮಾರಾಟವಾಗದೇ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರತಿ ವರ್ಷ ಎಕರೆಗೆ ಸುಮಾರು 40ರಿಂದ 45 ಚೀಲ ಭತ್ತ ಬೆಳೆಯುತ್ತಿದ್ದೇವು. ಅಲ್ಲದೆ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮವಾಗಿ ಬೆಲೆಯೂ ದೊರೆಯುತ್ತಿತ್ತು. ಆದರೆ ಈ ವರ್ಷ ಕಡ್ಡಿರೋಗದ ಪರಿಣಾಮವಾಗಿ ಇಳುವರಿಯೂ ಸುಮಾರು 35ರಿಂದ 40 ಚೀಲ ಬರುತ್ತಿದ್ದು, ಬೆಲೆ ಕಡಿಮೆಯಾಗಿರುವುದರಿಂದ ರೈತರ ಬದುಕು ಅತಂತ್ರವಾಗುತ್ತಿದೆ. –ವಾ. ಹುಲುಗಯ್ಯ, ರೈತ, ಬಗ್ಗೂರು

ಭತ್ತದ ಇಳುವರಿ ಕುಂಠಿತದ ಜತೆಗೆ ಉತ್ತಮ ಬೆಲೆಯೂ ದೊರೆಯದೇರೈತರು ಆತಂಕಕ್ಕೀಡಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ. ಆರ್‌. ಮಾಧವರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ

 

-ಆರ್‌. ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next