Advertisement

ಕೆರೆ ತುಂಬಿಸಲು ಆಗ್ರಹಿಸಿ ರೈತರ ಧರಣಿ

11:53 AM Sep 08, 2018 | |

ದೇವರ ಹಿಪ್ಪರಗಿ: ಸಮಗ್ರ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಹಾಗೂ ಮುಳವಾಡ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ದೇವರಹಿಪ್ಪರಗಿ ತಾಲೂಕು ನೀರಾವರಿ ಹೋರಾಟ ಸಮಿತಿ ಹಾಗೂ ವಿವಿಧ ಗ್ರಾಮಗಳ ರೈತರಿಂದ ಬೃಹತ್‌ ಪ್ರತಿಭಟನೆ ಜರುಗಿತು.

Advertisement

ಪಟ್ಟಣದ ಮಲ್ಲಯ್ಯನ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಸೇರಿದ ಸಾವಿರಾರು ರೈತರು, ನೀರು ಹರಿಯುವವರೆಗೆ ನಿಲ್ಲದು ಹೋರಾಟ, ಸಹನೆ ಬಲಹೀನತೆಯಲ್ಲ. ರೈತರ ತಾಳ್ಮೆ ಪರೀಕ್ಷಿಸಬೇಡಿ ಎಂಬ ವಿವಿಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ಅಂಬೇಡ್ಕರ್‌ ವೃತ್ತದಲ್ಲಿ ಸಭೆ
ಸೇರಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಗುರುನಾಥ ಬಗಲಿ, ಶಂಕರಗೌಡ ಪಾಟೀಲ, ರಾವುತ ತಳಕೇರಿ, ಸಂತೋಷ ಬಿರಾದಾರ, ನಿಂಗನಗೌಡ ಹುಲಸಗುಂದ, ಶಿವಾನಂದ ಕಗ್ಗೊಡ, ಸಂತೋಷ ತಳಕೇರಿ ಮಾತನಾಡಿ, ಚಿಮ್ಮಲಗಿ ಏತ ನೀರಾವರಿ 2013ರಲ್ಲಿ ಪ್ರಾರಂಭಗೊಂಡರು ಇಂದಿಗೂ
ಪೂರ್ಣಗೊಳ್ಳದಿರುವುದು ಈ ಭಾಗದ ಜನರ ದುರ್ದೈವವಾಗಿದ್ದು, ಈ ಬಾರಿ ಮುಂಗಾರಿನ ಎಲ್ಲ ಮಳೆ ಕೈಕೊಟ್ಟಿವೆ. ಇಂಥ ಸಮಯದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸವಾಗಬೇಕಾಗಿತ್ತು. ಆದರೆ ಸರಕಾರ ಹಾಗೂ ಅಧಿ ಕಾರಿಗಳ ನಿರ್ಲಕ್ಷ್ಯಾದಿಂದ ಕಾಲುವೆ ಕಾರ್ಯದ ಜೊತೆ ಕೆರೆ ತುಂಬುವ ಯೋಜನೆ ಆಮೆವೇಗದಲ್ಲಿ ಸಾಗುತ್ತಾ ರೈತರ ತಾಳ್ಮೆ ಪರೀಕ್ಷಿಸುತ್ತಿವೆ.

 ಮಳೆಯಿಲ್ಲದ ಕಾರಣ ತಾಲೂಕಿನ ಎಲ್ಲ ಗ್ರಾಮಗಳ ಜನತೆ ಕುಡಿಯುವ ನೀರಿಗೆ ಪರಿತಪಿಸುತ್ತಿರುವುದು ವಾಸ್ತವ ಸತ್ಯ. ಆದ್ದರಿಂದ ತ್ವರಿತವಾಗಿ ಮುಳವಾಡ ಏತ ನೀರಾವರಿ ಮೂಲಕ ಕೆರೆ ತುಂಬುವ ಕಾರ್ಯಕ್ಕೆ ಚಾಲನೆ ನೀಡಬೇಕು. ಸಮಗ್ರ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ, ಸರಕಾರ ಈ ಆಗ್ರಹಕ್ಕೆ
ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ನಂತರ ತಹಶೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಜಯಪುರ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಮಂಜುನಾಥ ಕೊಕಟನೂರ, ಸಂತೋಷ ಬಿರಾದಾರ, ಭೀಮನಗೌಡ ಪಾಟೀಲ, ಈರಣ್ಣ ಅಂಗಡಿ, ಶ್ರೀಶೈಲ ಇಂಡಿ, ಮಂಜುನಾಥ ಪಾಟೀಲ, ಪ್ರಭು ಬಿರಾದಾರ, ಯಮನೂರಿ ಸಾತಿಹಾಳ, ಉಮೇಶ ಗೌಳಿ, ರಾಮನಗೌಡ ಕೊಣ್ಣೂರ, ಸಂಗು ಕೆರೂಟಗಿ ಸೇರಿದಂತೆ ದೇವರ ಹಿಪ್ಪರಗಿ, ಇಂಗಳಗಿ, ಪಡಗಾನೂರ, ನಿವಾಳಖೇಡ ಗ್ರಾಮಗಳ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next