Advertisement

ಜೆಲ್ಲಿ ಕ್ರಷರ್‌ಗಳ ಪರವಾನಿಗೆ ರದ್ದಿಗೆ ರೈತರ ಆಗ್ರಹ

09:40 PM May 17, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಜೆಲ್ಲಿ ಕ್ರಷರ್‌ಗಳನ್ನು ನಡೆಸಲು ಪರವಾನಿಗೆ ನೀಡಿರುವುದನ್ನು ಖಂಡಿಸಿ ಜಿಲ್ಲೆಯ ಸಾದಲಿ ಹೋಬಳಿಯ ಕೋಟಗಲ್‌ ಗ್ರಾಮದ ಸುತ್ತಮುತ್ತಲಿನ ನೂರಾರು ರೈತರು ದಿಢೀರನೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜೆಲ್ಲಿ ಕ್ರಷರ್‌ಗಳ ಕಾರ್ಯಾರಂಭ ಸ್ಥಗಿತಗೊಳಿಸಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.

Advertisement

ಸಾದಲಿ ಹೋಬಳಿಯ ಕೋಟಗಲ್‌ ಬೆಟ್ಟದಲ್ಲಿ ಸರ್ವೆ ನಂ.72 ಹಾಗೂ 39 ರಲ್ಲಿ ಹೊಸದಾಗಿ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ ಬೆಟ್ಟದಲ್ಲಿ ಜಮಾಯಿಸಿದ ಸುತ್ತಮುತ್ತಲಿನ ರೈತರು ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್‌ ವಿರುದ್ಧ ಘೋಷಣೆ ಕೂಗಿದರು.

ಕುಟುಂಬಗಳು ಬೀದಿಗೆ ಬರುತ್ತವೆ: ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದರಿಂದ ಸುತ್ತಮುತ್ತಲಿನ ನೂರಾರು ರೈತ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ. ಈಗಾಗಲೇ ಜೆಲ್ಲಿಕ್ರಷರ್‌ಗಳು ನಡೆಯುತ್ತಿರುವ ಸುತ್ತಮುತ್ತಲಿನ ರೈತರ ತೋಟಗಳು ಸಂಪೂರ್ಣವಾಗಿ ಹಾಳಾಗಿದ್ದು, ಕೆಲವು ಕಡೆ ಮನೆಗಳು ಬಿರುಕು ಬಿಟ್ಟಿವೆ.

ಇಂತಹ ಸಂದರ್ಭದಲ್ಲಿ ಒಂದೇ ಕಡೆ ನಾಲ್ಕು ಗಣಿಗಾರಿಕೆ ನಡೆಸಲು ಜೆಲ್ಲಿ ಕ್ರಷರ್‌ಗಳಿಗೆ ಅವಕಾಶ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಬದುಕು ಕೂಡ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಜೀವಸಂಕುಲ ನಾಶ: ಕೋಟಗಲ್‌ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶ ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ಜಿಂಕೆ, ಕರಡಿ, ಮೊಲಗಳು, ಚಿರತೆಗಳು ಇದ್ದು ಪಕ್ಷಿ ಸಂಕುಲ ಕೂಡ ಅಪಾರವಾಗಿದೆ. ಒಂದು ವೇಳೆ ಜೆಲ್ಲಿ ಕ್ರಷರ್‌ಗಳು ಆರಂಭಗೊಂಡು ಕೇವಲ ರೈತರು ಮಾತ್ರವಲ್ಲದೇ ಜೀವ ಸಂಕುಲವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದರು.

Advertisement

ಗಣಿ ಇಲಾಖೆ ಶಾಮೀಲು: ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಕುಳಗಳ ಜೊತೆ ಶಾಮೀಲಾಗಿ ಸ್ಥಳೀಯ ಗ್ರಾಮಸ್ಥರನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಕಚೇರಿಗೆ ಮುತ್ತಿಗೆ: ಗ್ರಾಮಸ್ಥರ ಮನವಿ ಲೆಕ್ಕಿಸದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಅಂಟಿಕೊಂಡಿರುವ ಬೆಟ್ಟದಲ್ಲಿ ಜೆಲ್ಲಿ ಕ್ರಷರ್‌ಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ಗಣಿ ಮಾಲೀಕರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ.

ಜಿಲ್ಲಾಡಳಿತ ನೂರಾರು ರೈತ ಕುಟುಂಬಗಳ ಹಿತದೃಷ್ಟಿಯಿಂದ ಗಣಿಗಾರಿಕೆ ಪರವಾನಿಗೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಕೋಟಗಲ್‌ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮಗಳ ಜನರ ಆರೋಗ್ಯ ಮತ್ತು ಪರಿಸರ ಮೇಲೆ ದುಷ್ಪರಿಣಾಮ ಬೀರುವ ಜೆಲ್ಲಿ ಕ್ರಷರ್‌ಗಳನ್ನು ತಡೆಯದಿದ್ದರೆ ನಾವು ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next