ದಾವಣಗೆರೆ: ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡಿರುವ ಪ್ರತಿಯೊಬ್ಬ ರೈತರಿಗೆ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಒತ್ತಾಯಿಸಿದರು.
ಸೋಮವಾರ ನಗರದ ರೋಟರಿ ಬಾಲಭವನದಲ್ಲಿ ನಡೆದ ಅಖಂಡ ಕರ್ನಾಟಕ ರೈತಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದಅವರು, ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತರುಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ರೈತರಿಗೆ ಎಕರೆಗೆ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಎಲ್ಲಾ ರೈತರಿಗೆ ಎಕರೆಗೆ 10 ಸಾವಿರದಂತೆ ಪರಿಹಾರ ನೀಡಿದರೂ 10 ಸಾವಿರ ಕೋಟಿ ಆಗುತ್ತದೆ. ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರುವಂತಹ 23 ಸಾವಿರಕೋಟಿ ಆದಾಯದಲ್ಲಿ ರೈತರಿಗೆ ಪರಿಹಾರ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.ಕಳೆದ ಬಾರಿಯಂತೆ ಈ ವರ್ಷವೂ ಸಾಕಷ್ಟು ರೈತರು, ಜನರು ಮನೆ ಕಳೆದುಕೊಂಡು ಬೀದಿಯಲ್ಲಿ ವಾಸ ಮಾಡುವಂತಾಗಿದೆ. ಮನೆಯಾದರೂ ಇದ್ದಿದ್ದರೆ ಹೇಗೋ ಜೀವನ ಸಾಗಿಸುತ್ತಿದ್ದರು. ಪೂರ್ಣ ಹಾನಿಗೊಂಡ ಮನೆಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅದೇ ಮಾನದಂಡದಲ್ಲಿ ಈ ಬಾರಿಯೂ ಮನೆ ಕಳೆದುಕೊಂಡಂತಹವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ರೈತರ ಹೊಲಗಳಲ್ಲಿನ ಬೆಳೆ ಕಟಾವಿಗೆ ಬರುವ 15 ದಿನಗಳ ಮುಂಚೆಯೇ ಖರೀದಿ ಕೇಂದ್ರ ತೆರೆಯಬೇಕು. ಅನುದಾನ ಇರುವ ತನಕ ನಾಮಕಾವಸ್ತೆ ಖರೀದಿ ನಡೆಸುವಂತಾಗಬಾರದು. ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಧಾರಣೆ ದೊರೆಯುವ ತನಕ ಖರೀದಿ ಮಾಡಬೇಕು. ರಾಜ್ಯ ಸರ್ಕಾರ ಯಾವುದೇ ಬೆಳೆಗಳ ಬೆಲೆನಿಗದಿಗಾಗಿ ಮಂಡಳಿಗಳನ್ನು ಪ್ರಾರಂಭಿಸುವ ಜೊತೆಗೆರೈತರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಉತ್ಪಾದನೆ ಆಗುವಂತಹ ವಿದ್ಯುತ್ ನಲ್ಲಿ ಶೇ. 45 ಭಾಗ ರೈತರ ಪಂಪ್‌ಸೆಟ್‌ಗಳಿಗೆ ಬಳಕೆ ಆಗುತ್ತದೆ ಎಂದು ಹೇಳಲಾಗುತ್ತದೆ. ರೈತರ ಪಂಪ್‌ಸೆಟ್‌ಗಳಿಗಾಗಿಯೇ ಇರುವಂತಹ ಪ್ರತ್ಯೇಕ ವಿದ್ಯುತ್ ಮಾರ್ಗದಲ್ಲಿನ ವಿದ್ಯುತ್ ಪರಿವರ್ತಕಗಳಿಗೆ ಮೀಟರ್ ಅಳವಡಿಸುವುದರಿಂದ ಯಾವ ರೈತರು ಎಷ್ಟು ವಿದ್ಯುತ್ ಬಳಕೆ ಮಾಡಿದ್ದಾರೆ ಎಂಬ ಲೆಕ್ಕ ದೊರೆಯುತ್ತದೆ. ಮಾತ್ರವಲ್ಲ, ವಿದ್ಯುತ್ ವಿತರಣಾ ಕಂಪನಿಗಳಲ್ಲಿನ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿಮಾತನಾಡಿ, ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲಬೆಲೆ ಘೋಷಿಸುವ ಜೊತೆಗೆ ಖರೀದಿ ಕೇಂದ್ರವನ್ನೂ ತೆರೆಯಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದು ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರ ನೀಡಬೇಕು. ಶೇಂಗಾಕ್ಕೆ 30 ಸಾವಿರ ಪರಿಹಾರ ನೀಡಬೇಕು. ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೆರೆ ಹಾವಳಿಯ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಸಿದ್ದರಾಮಪ್ಪ ಅಣಜಿ, ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್, ನಿರ್ಮಲಕಾಂತ್ ಪಾಟೀಲ್, ಸುಧೀರ್ ಮಂಡ್ಯ, ಶ್ಯಾಮಸುಂದರ್ ಕೀರ್ತಿ, ಉಳ್ಳಪ್ಪ ಒಡೆಯರ್, ಎಚ್. ನಾಗರಾಜಪ್ಪ, ರಾಚರೆಡ್ಡಿ ಇತರರು ಇದ್ದರು.