ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷಗಳ ಸುಭದ್ರ ಸರ್ಕಾರ ನೀಡಲಿದ್ದು, ರೈತರ ಸಾಲ ಮನ್ನಾ ಮಾಡುವುದು ಖಚಿತ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ಬದಲಿಗೆ ರಾಜ್ಯದ ಜನರು ಪೂರ್ಣ ಬಹುಮತ ನೀಡಿದರೆ 24 ಗಂಟೆಯೊಳಗೆ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕಾರಣ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ.
ಹೀಗಿದ್ದರೂ ಬಿಜೆಪಿ ನಾಯಕರು ಸರ್ಕಾರಕ್ಕೆ ಅವಕಾಶ ನೀಡದೆ ಬಂದ್ ನಡೆಸಲು ಮುಂದಾಗಿದ್ದು, ಅವರ ಪ್ರಯತ್ನ ವಿಫಲವಾಗಿದೆ. ಆದರೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿದ ಬಳಿಕ ಸಾಲ ಮನ್ನಾ ಮಾಡುವುದು ಖಚಿತವಾಗಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಷರತ್ತು ಊಹಾಪೋಹ: ಸರ್ಕಾರ 5 ವರ್ಷ ಪೂರೈಸಲಿದ್ದು, ಕಾಂಗ್ರೆಸ್ ಹಲವು ಷರತ್ತು ವಿಧಿಸಿದೆ ಎಂಬುದು ಕೇವಲ ಊಹಾಪೋಹ. ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಆಗಲಿ ಎಂಬ ಉದ್ದೇಶದಿಂದ ಎರಡು ಜಾತ್ಯತೀತ ಪಕ್ಷಗಳು ಒಂದಾಗಿದ್ದು, ಮುಂದೆ ಬಲಿಷ್ಠವಾಗಲಿದೆ.
ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್ ಅನಿವಾರ್ಯ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಜತೆಯಾಗಿ ಸಾಗುತ್ತೇವೆ ಎಂದರು. ಅಲ್ಲದೆ, ಕುಮಾರಸ್ವಾಮಿ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.