ಕಮತಗಿ: ಕಲಿಕೆಗೂ ಸೈ, ಕೃಷಿ ಚಟುವಟಿಕೆಗೂ ಸೈ ಎಣಿಸಿಕೊಂಡ ಹುನಗುಂದ ತಾಲೂಕಿನ ಯರಿಗೋನಾಳದ ಅಶ್ವಿನಿ ಬಾದವಾಡಗಿ ಈಗ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ್ದಾಳೆ.
ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವೈ.ಆರ್. ಪಾಟೀಲ ಗ್ರಾಮೀಣ ಶಿಕ್ಷಣ (ಬಿ.ಇಡಿ) ಕಾಲೇಜಿನ ಪ್ರಶಿಕ್ಷಣಾರ್ಥಿ ಆಗಿರುವ ಅಶ್ವಿನಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ 2019ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ 1300 ಅಂಕಗಳಿಗೆ 1200 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಕಾಲೇಜಿಗೆ ನಿತ್ಯ ಹಾಜರಾಗಿ, ಎಲ್ಲ ಕ್ಲಾಸ್ ಗಳಲ್ಲಿ ತೊಡಗಿ, ಉಪನ್ಯಾಸಕರು ನೀಡುವ ಮಾಹಿತಿ ಚಾಚೂ ತಪ್ಪದೇ ಬರೆದು, ಶ್ರದ್ಧೆಯಿಂದ ಅಧ್ಯಯನ ಮಾಡಿದ್ದರಿಂದಲೇ ಪ್ರಥಮ ರ್‍ಯಾಂಕ್ ಗಳಿಸಲು ಸಾಧ್ಯವಾಗಿದೆ ಎನ್ನುತ್ತಾಳೆ ಅಶ್ವಿನಿ. ತಂದೆ ಸಂಗಪ್ಪ, ತಾಯಿ ಶಿವಮ್ಮ ತಮ್ಮೂರಿನಲ್ಲಿ ಒಂದು ಎಕರೆ ನೀರಾವರಿ, ಒಂದು ಎಕರೆ ಒಣಬೇಸಾಯಿ ಭೂಮಿಯಲ್ಲಿ ಬಿತ್ತನೆ ಮಾಡುತ್ತ ಬರುವ ಆದಾಯದಲ್ಲಿ ಜೀವನ ಮುಂದಿರುವ ಅಶ್ವಿನಿ, ರವಿವಾರ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ತಂದೆ-ತಾಯಿಗಳಿಗೆ ಆಸರೆಯಾಗಿದ್ದಾಳೆ ಎನ್ನುವ ತಂದೆ ಸಂಗಪ್ಪ ಮಗಳ ಈ ಸಾಧನೆಗೆ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆ; ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಬಾದಲ್
ನಾಗೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಪಿಯುಸಿ, ಹುನಗುಂದ ಬಿಎಂಎಸ್‌ಆರ್ ವಸ್ತ್ರದ ಪದವಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಕಮತಗಿ ವೈ.ಆರ್. ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿಬಿ.ಇಡಿ ಅಭ್ಯಾಸ ಮಾಡಿ ಸಾಧನೆ ಮಾಡಿ ಎಂಎಸ್‌ಸಿ ಮಾಡುವ ಕನಸು ಹೊಂದಿದ್ದಾಳೆ.
ಅಶ್ವಿನಿ ಕಾಲೇಜಿಗೆ ತಪ್ಪದೇ ಹಾಜರಾಗಿ, ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದಳು. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಈ ಹಿಂದೆ ಅನೇಕ ರ್‍ಯಾಂಕ್ ಪಡೆದಿದ್ದು, ಅಶ್ವಿನಿ ಮೂಲಕ ಪ್ರಥಮ ರ್‍ಯಾಂಕ್ ಲಭಿಸಿದ್ದು ಸಂತಸ ತಂದಿದೆ.
–ಡಾ| ಎಸ್.ಎಂ. ರಡ್ಡಿ, ಪ್ರಾಚಾರ್ಯರು, ವೈಆರ್‌ಪಿ ಮಹಿಳಾ ಬಿಎಡ್ ಕಾಲೇಜ್, ಕಮತಗಿ
ಸಾಲ, ಸೂಲ ಮಾಡಿ ಮಗಳನ್ನು ಓದಿಸಿದ್ದೇವೆ. ನಿರಂತರ ಅದರಲ್ಲೂ ನಸುಕಿನ ಜಾವ ಓದುತ್ತಿದ್ದ ಅಶ್ವಿನಿ ರವಿವಾರ ಬಂದರೆ ಹೊಲಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾಳೆ. ಮುಂದೇ ಅವಳ ಆಶಯದಂತೆಯೇ ಓದಿಸುತ್ತೇವೆ.
–ಸಂಗಪ್ಪ ಬಾದವಾಡಗಿ, ಅಶ್ವಿನಿ ತಂದೆ, ಎರೆಗೋನಾಳ
ನಮ್ಮ ಮಹಾವಿದ್ಯಾಯದ ನುರಿತ ಉಪನ್ಯಾಸಕರಿಂದಪ್ರಶಿಕ್ಷಣಾರ್ಥಿಗಳಿಗೆ ಗುಣಮಟ್ಟದಬೋಧನೆ ದೊರೆಯುತ್ತಿರುವುದರಿಂದ ನಮ್ಮ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪ್ರತಿ ವರ್ಷ ಎರಡ್ಮೂರು ರ್‍ಯಾಂಕ್ ಪಡೆಯುತ್ತಾರೆ. ಈ ವರ್ಷ 6 ರ್‍ಯಾಂಕ್ ಸಿಕ್ಕಿರುವುದು ಸಂಸ್ಥೆಯ ಕೀರ್ತಿ ಹೆಚ್ಚಿದೆ.
–ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಅಧ್ಯಕ್ಷರು, ಹುಚ್ಚೇಶ್ವರ ವಿದ್ಯಾವರ್ಧಕ ಸಂಘ, ಕಮತಗಿ