Advertisement

ರೈತರ ಬೆಳೆಗೆ ಕಾನೂನು ಚೌಕಟ್ಟಿನಲ್ಲಿ ಬೆಲೆ ಸಿಗಲಿ

09:28 PM Dec 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ದೇಶ ಕಾಯುವ ಸೈನಿಕರಿಗೆ ಸಿಗುವ ಗೌರವ, ಸೌಲಭ್ಯಗಳು ಇಂದು ದೇಶಕ್ಕೆ ಅನ್ನ ಕೊಡುವ ರೈತರಿಗೆ ಸಿಗುತ್ತಿಲ್ಲ. ರೈತರು ಉದ್ಧಾರ ಆಗಬೇಕಾದರೆ ರೈತರು ಬೆಳೆಯುವ ಬೆಳೆಗಳಿಗೆ ಕಾನೂನು ಚೌಕಟ್ಟಿನಲ್ಲಿ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ತಾಲೂಕಿನ ಬಲಜಿಗ ಪಡೆ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಮಂಜುಳಾ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಜಿಪಂ, ತಾಪಂ ಹಾಗೂ ಕೃಷಿ ಇಲಾಖೆ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಕಿಸಾನ್‌ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರೈತರ ಹೆಸರಿನಲ್ಲಿ ಕಂಪನಿಗಳು ಉದ್ಧಾರ ಆಗುವುದು ಬಿಟ್ಟರೆ ರೈತರ ಬೆವರಿಗೆ ಫ‌ಲ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭದ್ರತೆ ಇಲ್ಲ: ಸಮಾಜದಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು ಸರ್ಕಾರಿ ನೌಕರರಿಗೆ ಕೆಲಸ ಸ್ಥಳದಲ್ಲಿ ಭದ್ರತೆ ಇರುತ್ತದೆ. ಆದರೆ ರೈತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ದಿನದ 24 ಗಂಟೆ ಕಾಲ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಕೆಲಸ ಮಾಡುವ ಸ್ಥಿತಿ ರೈತರದ್ದಾಗಿದೆ ಎಂದರು. ರೈತರಿಗೆ ಕನಿಷ್ಠ ದಿನ ಬಳಕೆ ವಸ್ತುಗಳನ್ನು ತೆರಿಗೆ ಮುಕ್ತ ಮಾಡಬಹುದಾಗಿತ್ತು. ಸರ್ಕಾರಗಳಿಂದ ಸೂಕ್ತ ಬೆಂಬಲ, ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.

ರೈತರನ್ನು ಬಲಗೊಳಿಸುವ ಕಾನೂನುಗಳು ಜಾರಿಗೆ ತರುವುದು ಅಗತ್ಯ ಎಂದರು. ರೈತರ ಕಷ್ಟಸುಖಗಳ ಬಗ್ಗೆ ನಾಗರಿಕ ಸಮಾಜ ಚಿಂತನ, ಮಂಥನ ಮಾಡಬೇಕು. ರೈತರ ದಿನಾಚರಣೆಯನ್ನು ಕೇವಲ ರೈತರನ್ನು ಸೇರಿಸಿ ಆಚರಿಸುವುದರ ಬದಲು ರೈತರ ಹೊರತಾಗಿ ಸಾರ್ವಜನಿಕರನ್ನು, ವಿದ್ಯಾವಂತ ಯುವಕರನ್ನು ಸೇರಿಸಿ ಮಾಡಿದಾಗ ರೈತರ ಸಮಸ್ಯೆ, ಸವಾಲುಗಳ ಸಮಾಜಕ್ಕೆ ಅರ್ಥವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕಿ ಡಾ.ಅನುರೂಪ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜ್ಯೋತಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕೆಂಪಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್‌.ನರಸಿಂಹಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ರಾಮಾಂಜನಪ್ಪ, ಶಿಡ್ಲಘಟ್ಟ ತಾಲೂಕು ರೈತ ಸಂಘದ ಅಧ್ಯಕ್ಷ ಪಿ.ಎನ್‌.ಮಂಜುನಾಥ, ಆತ್ಮ ಯೋಜನೆಯ ಸಿಬ್ಬಂದಿ ಅರುಣಾ ಸೇರಿದಂತೆ ತಾಲೂಕಿನ ಪ್ರಗತಿಪರ ರೈತರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ರೈತರಿಗೆ ಕೃಷಿ ವಸ್ತು ಪ್ರದರ್ಶನ: ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಕಿಸಾನ್‌ ಗೋಷ್ಠಿ ಪ್ರಯುಕ್ತ ರೈತರಿಗೆ ಸಮಗ್ರ ಕೃಷಿ ಬೇಸಾಯ ಪದ್ಧತಿಗಳ ಬಗ್ಗೆ ಹಾಗೂ ಸಾವಯುವ ಹಾಗೂ ಸಿರಿಧಾನ್ಯಗಳ ಮಹತ್ವದ ಕುರಿತು ಅರಿವು ಮೂಡಿಸುವ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ವಿಶೇಷವಾಗಿ ಸಿರಿಧಾನ್ಯಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಲ ಪ್ರಗತಿಪರ ರೈತರನ್ನು ಕೃಷಿ ಇಲಾಖೆ ಗುರುತಿಸಿ ಸನ್ಮಾನಿಸಿತು.

ವಿದ್ಯಾವಂತರಿಂದ ಭೂಮಿಗೆ ಹಾನಿ
ಚಿಕ್ಕಬಳ್ಳಾಪುರ: ಅನಕ್ಷರಸ್ಥರಿಗಿಂತ ವಿದ್ಯಾವಂತರಿಂದಲೇ ಇಂದು ಭೂಮಿಗೆ ಹೆಚ್ಚು ತೊಂದರೆ ಆಗುತ್ತಿದೆ ಎಂದು ಜಿಲ್ಲೆಯ ಖ್ಯಾತ ಸಾವಯುವ ಕೃಷಿಕ ಮಹಿಳೆ ಗೌರವಮ್ಮ ತಿಳಿಸಿದರು. ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಆಯೋಜಿಸಿದ್ದ ಕಿಸಾನ್‌ಗೋಷ್ಠಿಯಲ್ಲಿ ಸಾವಯುವ ಕೃಷಿಯ ಮಹತ್ವದ ಕುರಿತು ಮಾತನಾಡಿದ ಅವರು, ಔಷದಿ ಮಾರುವ ಕಂಪನಿಗಳ ಕಟ್ಟಡಗಳು ವರ್ಷದಿಂದ ವರ್ಷಕ್ಕ ಬೆಳೆಯುತ್ತಲೇ ಇರುತ್ತವೆ. ಆದರೆ ಕೃಷಿ ಮಾರುವ ರೈತರ ಕಟ್ಟಡಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿವೆಯೇ? ಎಂದು ಗೌರಮ್ಮ ಪ್ರಶ್ನಿಸಿದರು.

ಕೃಷಿ ಕ್ಷೇತ್ರ ಉದ್ಧಾರ ಆಗಬೇಕಾದರೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಶ್ರಮ ವಹಿಸಬೇಕೆಂದರು. ರಸಾಯನಿಕ ಗೊಬ್ಬರಗಳನ್ನು ಆದಷ್ಟು ಕಡಿಮೆ ಮಾಡಬೇಕು. ಹೆಚ್ಚು ಹೆಚ್ಚು ಸಾವಯುವ ಗೊಬ್ಬರ ಬಳಕೆಯಿಂದ ಇಳುವರಿ ಅಧಿಕಗೊಳ್ಳುವುದರ ಜೊತೆಗೆ ಆರೋಗ್ಯವಂತ ಬೆಳೆಗಳನ್ನು ಬೆಳೆಯಬಹುದು ಎಂದರು. ರೈತ ಮಹಿಳೆಯರು ದನಕುರುಗಳ ಸಾಕಾಣೆಗೆ ಪ್ರಾಮುಖ್ಯತೆ ಕೊಡಬೇಕು. ಇದರಿಂದ ಸಾವಯುವ ಗೊಬ್ಬರ ಸಿಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next