Advertisement

ಬೆಳೆವಿಮೆ: ಮಾಹಿತಿಯಿಲ್ಲದೆ ರೈತರಿಗೆ ಗೊಂದಲ

09:38 AM Jul 03, 2018 | Harsha Rao |

ಕುಂದಾಪುರ: ಸಹಕಾರಿ ಸಂಘಗಳಿಂದ ಹಾಗೂ ಬ್ಯಾಂಕುಗಳಿಂದ ಬೆಳೆ ಸಾಲ ಪಡೆಯುವಾಗ ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಗೆ ಸೇರ್ಪಡೆ ಕಡ್ಡಾಯ ಮಾಡಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿಮೆ ಕುರಿತು ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ.

Advertisement

ಕೇಂದ್ರದ ಯೋಜನೆ
ಪ್ರಧಾನಮಂತ್ರಿ ಫ‌ಸಲು ವಿಮಾ ಕೇಂದ್ರ ಸರಕಾರದ ಯೋಜನೆ. ಪಂಚಾಯತ್‌ಗಳನ್ನು ವಿಮಾ ಘಟಕ ಎಂದು ಪರಿ ಗಣಿಸಲಾಗಿದ್ದು, ವಿಮೆ ಮಾಡಿಸಿದ ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿ ಉಂಟಾದಾಗ ಪರಿಹಾರ ನೀಡಲಾಗುತ್ತದೆ. ನಿರ್ಧರಿತ ಬೆಳೆಯ ಫ‌ಸಲಿನ ಮೌಲ್ಯದ ಮೇಲೆ ವಿಮೆ ಕಂತು ನಿರ್ಧಾರವಾಗುತ್ತದೆ. ಇದು 2016ರಲ್ಲಿ ಶೇ.10, 2017ರಲ್ಲಿ ಶೇ.34 ಆಗಿದ್ದರೆ 2018ರಲ್ಲಿ ಶೇ.40 ಇದೆ. ಕಂತಿನ ಶೇ.5ನ್ನು ಫ‌ಲಾನುಭವಿ; ಉಳಿದ ಶೇ.35ನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮವಾಗಿ ಭರಿಸುತ್ತವೆ. ಉಡುಪಿ ಹಾಗೂ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಅಡಿಕೆ ಹಾಗೂ ಕಾಳುಮೆಣಸನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗಿದ್ದು, ಅಡಿಕೆಗೆ ಹೆಕ್ಟೇರಿಗೆ 1.28 ಲಕ್ಷ ರೂ., ಕಾಳು ಮೆಣಸಿಗೆ 47 ಸಾವಿರ ರೂ. ಪರಿಹಾರ ದೊರೆಯುತ್ತದೆ. ಇದಕ್ಕಾಗಿ ರೈತ 6,400 ರೂ., ಹಾಗೂ 2,350 ರೂ. ವಿಮಾ ಕಂತು ತುಂಬಬೇಕು. ಸರಕಾರ ಇದಕ್ಕಾಗಿ 44,800 ರೂ. ಹಾಗೂ 16,450 ರೂ.ಗಳನ್ನು ವಿಮಾ ಕಂಪೆನಿಗೆ ತುಂಬುತ್ತದೆ. ಸಾಲ ಪಡೆಯದಿದ್ದವರು ಕೂಡ ಈ ವಿಮಾ ವ್ಯಾಪ್ತಿಗೆ ಸೇರಬಹುದು.|
 
ಕಡ್ಡಾಯ-ಗೊಂದಲ
ದೀರ್ಘಾವಧಿ ಹಾಗೂ ಅಲ್ಪಾವಧಿ ಬೆಳೆ ಸಾಲ ಪಡೆಯುವಾಗ ವಿಮೆ ಕಡ್ಡಾಯ. ಇದರಿಂದಾಗಿ ಸಹಕಾರಿ ಸಂಘಗಳಲ್ಲಿ ಸಾಲ ಪಡೆಯುವ ರೈತರು ಗೊಂದಲಕ್ಕೊಳಗಾಗಿದ್ದಾರೆ. ಶೂನ್ಯ ಬಡ್ಡಿದರದ ಸಾಲ ಪಡೆದರೂ ಶೇ.5ನ್ನು ವಿಮಾ ಕಂತಾಗಿ ನೀಡಬೇಕಾಗುತ್ತದೆ. ಸಹಕಾರಿ ಸಂಘದ ಖಾತೆಗೆ ಆಧಾರ್‌ ಜೋಡಣೆ ಮಾಡದಿದ್ದರೆ ವಿಮೆ ಅಸಾಧ್ಯ. ಜೂ. 30 ವಿಮೆಗೆ ಕೊನೆಯ ದಿನ. ಜತೆಗೆ ಈ ವಿಮೆಯಲ್ಲಿ ಸಾಮೂಹಿಕ ಅನಾಹುತಕ್ಕೆ ಮಾತ್ರ ಪರಿಹಾರ ದೊರೆಯುತ್ತದೆ ವಿನಾ ವೈಯಕ್ತಿಕವಾಗಿ ಪರಿಹಾರ ದೊರೆಯುವುದಿಲ್ಲ.


ಪ್ರಯೋಜನ

ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ 3,097 ರೈತರು ತೋಟಗಾರಿಕೆ ಇಲಾಖೆ ಯಲ್ಲಿ 1,900 ಹೆಕ್ಟೇರ್‌ಗೆ ಫ‌ಸಲು ವಿಮೆ ಮಾಡಿಸಿದ್ದರು. 23.06 ಕೋ.ರೂ. ವಿಮೆ ಮೊತ್ತ ಪೈಕಿ 1.15 ಕೋ.ರೂ.ಗಳನ್ನು ರೈತರು ತುಂಬಿದ್ದರು. ಇದರಲ್ಲಿ 6,093 ಪ್ರಕರಣಗಳಿಗೆ ವಿಮೆಗೆ ಅರ್ಜಿ ಸಲ್ಲಿಸಲಾಗಿತ್ತು. 4,481 ಪ್ರಕರಣಗಳಿಗೆ 1.58 ಕೋ.ರೂ. ಪರಿಹಾರ ಪಾವತಿಸಲಾಗಿದ್ದು, 1,111 ಪ್ರಕರಣಗಳ 51 ಲಕ್ಷ ರೂ. ಪಾವತಿಗೆ ಬಾಕಿ ಇದೆ. ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆಯಾದ ಕಾರಣ ಹೆಚ್ಚಿನ ಪ್ರಯೋಜನ ದೊರೆತಿದೆ. ಕೃಷಿ ಇಲಾಖೆಯಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫ‌ಸಲು ವಿಮೆಯಲ್ಲಿ 1,415 ರೈತರು 3,698 ಎಕರೆಗೆ 7.63 ಕೋ.ರೂ.ಗೆ ವಿಮಾ ಮಾಡಿಸಿ 4.47 ಲಕ್ಷ ರೂ. ಕಂತು ಪಾವತಿಸಿದ್ದರು. 

ಅಧಿಕ ಕಂತು
ಅಡಿಕೆ ಹಾಗೂ ಕಾಳುಮೆಣಸನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಿದ ಕಾರಣ ಕಂತು ಅಧಿಕವಿದೆ. ಆದ್ದರಿಂದ ವಾಣಿಜ್ಯ ಬೆಳೆ ಪ್ರಸ್ತಾಪ ಕೈಬಿಡುವಂತೆ, ವಿಮಾ ಮೊತ್ತ ಕಡಿಮೆ ಮಾಡುವಂತೆ ರೈತರ ಒತ್ತಾಯ ಇದೆ. ಭತ್ತದಲ್ಲಿ ಹಾನಿ ಸಾಧ್ಯತೆ ಕಡಿಮೆ ಎಂದು ವಿಮಾ ಕಂತಿನ ಮೊತ್ತ ಕಡಿಮೆ ಮಾಡಲಾಗಿದೆ. 

ರಾಜ್ಯವ್ಯಾಪಿ ನೋಟ
ತೋಟಗಾರಿಕಾ ಬೆಳೆ ವಿಮೆ ಪರಿಹಾರ: ದ.ಕ.ಕ್ಕೆ 6ನೇ, ಉಡುಪಿಗೆ 10ನೇ ಸ್ಥಾನ. ರಾಜ್ಯದಲ್ಲಿ 99,373 ರೈತರು 90,427 ಹೆಕ್ಟೇರ್‌ಗೆ ವಿಮೆ ಮಾಡಿಸಿದ್ದರು. 1,71,198 ಪ್ರಕರಣ ದಾಖಲಾಗಿ 254 ಕೋ.ರೂ. ಪರಿಹಾರ ನೀಡಲಾಗಿದೆ. ರೈತರ ಕಂತು 42.55 ಕೋ.ರೂ.; ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಪರವಾಗಿ 56.6 ಕೋ.ರೂ.ಗಳನ್ನು ವಿಮಾ ಕಂಪೆನಿಗೆ ಪಾವತಿಸಿದ್ದವು. ರೈತರಿಗೆ ಬೆಳೆವಿಮೆ ಕುರಿತು ಸಮರ್ಪಕ ಮಾಹಿತಿ ಇಲ್ಲ. ಆದ್ದರಿಂದ ಶೂನ್ಯ ಬಡ್ಡಿಯ ಸಾಲ ಪಡೆಯುವಾಗ ಗೊಂದಲ ಆಗುತ್ತಿದೆ. ಮಾಹಿತಿ ಒದಗಿಸುವ ಕಾರ್ಯ ನಡೆಯಬೇಕಿದೆ.
– ಸುಭಾಶ್ಚಂದ್ರ ರೈ, ಪಡೊಡಿಗುತ್ತು

Advertisement

ಕಳೆದ ಬಾರಿ ಮುಂಗಾರಿನಲ್ಲಿ 1,415, ಹಿಂಗಾರಿನಲ್ಲಿ 110 ರೈತರು ವಿಮೆ ಮಾಡಿಸಿದ್ದು ಈ ಬಾರಿಯೂ ಪ್ರಕ್ರಿಯೆ ಮಾಡಿಸಲಾಗುತ್ತಿದೆ. 
– ವಿಠಲ ರಾವ್‌, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next