Advertisement

ಸರ್ಕಾರಗಳಿಗಿಲ್ಲ ರೈತರ ಕಾಳಜಿ

12:07 PM Oct 22, 2021 | Team Udayavani |

ಚಿಂಚೋಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ರೈತರು ಸಾಲ ಮನ್ನಾ ಮಾಡುವಂತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಭಾರತ ಕಮುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದ ಮಹಾಂತೇಶ್ವರ ಮಠದಲ್ಲಿ ಗುರುವಾರ ನಡೆದ ಸಿಪಿಐ (ಎಂ)ಪಕ್ಷದ 8ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ದೊಡ್ಡ ಕಂಪನಿಗಳಿಗೆ ಬ್ಯಾಂಕ್‌ನಿಂದ 11 ಲಕ್ಷ ಕೋಟಿ ರೂ. ಸಾಲ ನೀಡಿದ್ದರಿಂದ ಕೆಲವು ಬ್ಯಾಂಕ್‌ ಗಳು ದಿವಾಳಿಯಾಗಿವೆ. ಕೇಂದ್ರ ಸರ್ಕಾರ ನೋಟು ಬದಲಾಯಿಸಿ ಜನರಿಗೆ ಮೋಸ ಮಾಡಿತು. ಶ್ರೀಮಂತರ 10 ಲಕ್ಷ ಕೋಟಿ ರೂ. ತೆರಿಗೆ ಮನ್ನಾ ಮಾಡಲಾಗಿದೆ. ಆದರೆ ರೈತರ ಸಾಲ ಮನ್ನಾ ಮಾಡಿಲ್ಲ. ಇದರಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ದೆಹಲಿಯಲ್ಲಿ 550 ರೈತ ಸಂಘಟನೆಗಳು ಕಳೆದ 10 ತಿಂಗಳಿಂದ ಹೋರಾಟ ನಡೆಸುತ್ತಿವೆ. 600 ರೈತರು ಮೃತಪಟ್ಟಿದ್ದಾರೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಭೀಮಶೆಟ್ಟಿ ಎಂಪಳ್ಳಿ ಮಾತನಾಡಿ, ತಾಲೂಕಿನಲ್ಲಿ ಮಳೆ ಹೆಚ್ಚಾಗಿ ಸುರಿದಿದ್ದರಿಂದ ಮುಂಗಾರು ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಪ್ರವಾಹದಿಂದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ರೈತರ ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಳಕೆ ಎಲ್ಲ ಸಾಮಗ್ರಿಗಳು ಕೊಚ್ಚಿಕೊಂಡು ಹೋಗಿವೆ. ಆದರೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

Advertisement

ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತರಾವ್‌ ಬೀರಾದಾರ, ಸಿದ್ಧಲಿಂಗಯ್ಯ ಮಠಪತಿ ಇನ್ನಿತರರು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಜಾಫರಖಾನ್‌ ಮಿರಿಯಾಣ, ಖಾಜಾಮಿಯಾ ಇನಾಮದಾರ, ಪ್ರದೀಪ ತಿರಲಾಪುರ, ದೇವೇಂದ್ರಪ್ಪ ಪಾಟೀಲ, ಗೌರಿಶಂಕರ ಕಿಣ್ಣಿ, ಸಿದ್ಧಪ್ಪ ಭುತಾಳಿ, ಹಣಮಂತರೆಡ್ಡಿ ಕೊಳ್ಳುರ, ಶಾಂತಾಬಾಯಿ ಸುಂಠಾಣ, ಸಿದ್ಧಾರ್ಥ ಠಾಕೂರ, ವೈಜನಾಥ ಸಾತೆಪ್ಪ, ಜಗದೇವಿ ಚಂದನಕೇರಾ, ತುಳಜಪ್ಪ ರುಸ್ತಂಪೂರ, ಸೌಭಾಗ್ಯಮ್ಮ ಮಠಪತಿ, ಮಹಾದೇವಿ ಪಾಟೀಲ, ರತ್ನಾ ಉಡುಪಿ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್‌-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ್‌ಗೆ ಸಲ್ಲಿಸಲಾಯಿತು. ಭೀಮಶೆಟ್ಟಿ ಎಂಪಳ್ಳಿ ಸ್ವಾಗತಿಸಿದರು, ಗೌರಿಶಂಕರ ರಟಕಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next