Advertisement

ಅಡಕೆ ಬೆಳೆಯತ್ತ ಚಿತ್ತ ಹರಿಸಿದ ಅನ್ನದಾತ

04:47 PM Jun 12, 2022 | Team Udayavani |

ಹಾವೇರಿ: ಅರೆಮಲೆನಾಡು ಪ್ರದೇಶವಾದ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಿಂತ ಕೃಷಿ ಬೆಳೆಗೇ ರೈತರು ಒತ್ತು ನೀಡುತ್ತ ಬರುತ್ತಿದ್ದರು. ಆದರೆ, ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಬೆಳೆ ವಿಸ್ತರಣೆಗೆ ಪ್ರೋತ್ಸಾಹ ನೀಡುತ್ತಿರುವ ಹಿನ್ನೆಲೆಯಲ್ಲಿ ರೈತರು ಅಡಕೆ ಬೆಳೆಗೆ ಒಲವು ತೋರುತ್ತಿದ್ದು, ಕೇವಲ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 2494 ಹೆಕ್ಟೇರ್‌ನಷ್ಟು ಅಡಕೆ ಬೆಳೆ ವಿಸ್ತಾರಗೊಂಡಿದೆ.

Advertisement

ಜಿಲ್ಲೆಯ ಬಹುತೇಕ ರೈತರು ಗೋವಿನಜೋಳ, ಶುಂಠಿ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಇತರೆ ಪ್ರಮುಖ ಬೆಳೆ ಬೆಳೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶುಂಠಿ, ಮಾವು ಬೆಳೆಯತ್ತ ಒಲವು ತೋರಿದ್ದ ರೈತರು, ಕಳೆದ ಎರಡು ವರ್ಷಗಳಿಂದ ಅಡಕೆ ಬೆಳೆಯತ್ತ ಚಿತ್ತ ನೆಟ್ಟಿದ್ದಾರೆ. ಹಾನಗಲ್ಲ, ಹಿರೇಕೆರೂರು, ಬ್ಯಾಡಗಿ ತಾಲೂಕುಗಳಲ್ಲಿ ಅಡಕೆ ಕ್ಷೇತ್ರ ಹೆಚ್ಚುತ್ತಿದೆ. ಕ್ವಿಂಟಲ್‌ ಅಡಕೆಗೆ ಸರಿಸುಮಾರು 50 ಸಾವಿರ ರೂ. ಬಂದಿರುವುದೇ ಇದಕ್ಕೆ ಮುಖ್ಯ ಕಾರಣವಾದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಬೆಳೆ ವಿಸ್ತರಣೆಗೆ ಪ್ರೋತ್ಸಾಹ ಸಿಗುತ್ತಿರುವುದು ಮತ್ತೂಂದು ಕಾರಣವಾಗಿದೆ.

ಅಡಕೆಯತ್ತ ರೈತರ ಚಿತ್ತ: ಶಿರಸಿ ತಾಲೂಕಿಗೆ ಹೊಂದಿಕೊಂಡಿರುವ ಹಾನಗಲ್ಲ ತಾಲೂಕು, ಶಿಕಾರಿಪುರದ ಪಕ್ಕದಲ್ಲಿರುವ ಹಿರೇಕೆರೂರು ತಾಲೂಕುಗಳಲ್ಲಿ ಮೊದಲಿನಿಂದಲೂ ಅಡಕೆ ಬೆಳೆಯುವ ರೈತರಿದ್ದರೂ ಅಷ್ಟಾಗಿ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿರಲಿಲ್ಲ. ಗೋವಿನಜೋಳ, ಹತ್ತಿ ಬೆಳೆಯನ್ನೇ ನೆಚ್ಚಿಕೊಂಡಿದ್ದರು. ಬೀಜೋತ್ಪಾದನೆಯೊಂದಿಗೆ ನಿಧಾನವಾಗಿ ಶುಂಠಿ, ಮಾವು ಬೆಳೆಯತ್ತ ಮುಖ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಹಾನಗಲ್ಲ ಮತ್ತು ಹಿರೇಕೆರೂರು ಭಾಗದಲ್ಲಿ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಿತ್ತು. ಕಳೆದ ಎರಡು ವರ್ಷಗಳಿಂದ ಅಡಕೆ ಧಾರಣೆ ಗಗನಮುಖೀಯಾಗಿರುವುದರಿಂದ ನೀರಾವರಿ ಸೌಲಭ್ಯ ಇರುವ ರೈತರೆಲ್ಲರೂ ಅಡಕೆ ತೋಟವನ್ನೇ ಮಾಡಲು ಮುಂದಾಗುತ್ತಿದ್ದಾರೆ.

ಧಾರಣೆ-ನೀರಾವರಿ ಸೌಲಭ್ಯ: ಜಿಲ್ಲೆಯ ಹಾನಗಲ್ಲ, ಹಿರೇಕೆರೂರು ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಕೆರೆ ತುಂಬಿಸುವ ಯೋಜನೆ, ಹತ್ತಾರು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರ ಫಲವಾಗಿ ಬಹುವಾರ್ಷಿಕ ಅಡಕೆ ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ. ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆಗಳು ತುಂಬಿರುವುದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ಬೋರ್‌ವೆಲ್‌ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡು ಅನೇಕರು ಅಡಕೆ ಬೆಳೆಯುತ್ತಿದ್ದಾರೆ.

ಅಡಕೆ ದರವೂ ರೈತರನ್ನು ಆಕರ್ಷಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಿರವಾದ ದರ ಇರುವುದರ ಜತೆಗೆ ಕ್ವಿಂಟಲ್‌ ಅಡಕೆಗೆ 50 ಸಾವಿರ ರೂ., ಆಸುಪಾಸಿನಲ್ಲಿರುವುದರಿಂದ ರೈತರು ಈ ಬೆಳೆಯತ್ತ ಚಿತ್ತ ನೆಟ್ಟಿದ್ದಾರೆ. ಅಡಕೆ ಬೆಳೆಗೆ ಕಾರ್ಮಿಕರ ಸಂಖ್ಯೆಯೂ ಹೆಚ್ಚು ಬೇಕಿಲ್ಲದಿರುವುದು ಅನುಕೂಲಕರವಾಗಿದೆ. ಇದರೊಂದಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಬೆಳೆ ವಿಸ್ತರಣೆಗೆ ಅವಕಾಶ ದೊರೆತ ಮೇಲೆ ಅನೇಕರು ಇದರ ಪ್ರಯೋಜನ ಪಡೆದಿದ್ದಾರೆ.

Advertisement

ಮಾವು ಕ್ಷೇತ್ರದಲ್ಲಿ ಇಳಿಕೆ:ಹಾನಗಲ್ಲ ಭಾಗದಲ್ಲಿ ಮಾವು ಬೆಳೆಯುತ್ತಿದ್ದ ರೈತರು ಈಗ ಅಲ್ಲಿ ಅಡಕೆ ತೋಟ ಮಾಡುತ್ತಿದ್ದಾರೆ. ಅಕಾಲಿಕ ಮಳೆ, ಅತಿವೃಷ್ಟಿ ಇನ್ನಿತರ ಕಾರಣದಿಂದ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತ ಬಂದಿದ್ದರು. ಅಲ್ಲದೇ, ಮಾರುಕಟ್ಟೆಯೂ ಸರಿಯಾಗಿ ಇಲ್ಲದಿರುವುದು ಮಾವು ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಅಡಕೆಗೆ ಶಿರಸಿ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಣ್ಣ, ದೊಡ್ಡ ರೈತರೆಲ್ಲ ಅಡಕೆ ಬೆಳೆಯತ್ತ ವಾಲುತ್ತಿದ್ದಾರೆ. ಅಡಕೆ ಬೆಳೆಯಿಂದ ನಷ್ಟವಿಲ್ಲ ಎಂಬ ಅಭಿಪ್ರಾಯಕ್ಕೆ ರೈತರು ಬಂದಿದ್ದಾರೆ.

2494 ಹೆಕ್ಟೇರ್‌ ಅಡಕೆ ಬೆಳೆ ವಿಸ್ತರಣೆ:

ಜಿಲ್ಲೆಯಲ್ಲಿ 2020ರವರೆಗೆ 7087 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಿತ್ತು. ಅಲ್ಲಿಂದ ಕೇವಲ 2 ವರ್ಷಗಳ ಅವಧಿಯಲ್ಲಿ ಅದು 10 ಸಾವಿರ ಹೆಕ್ಟೇರ್‌ಗೆ ವಿಸ್ತಾರಗೊಂಡಿದೆ. 2021ನೇ ಸಾಲಿನಲ್ಲಿ 899 ಹೆಕ್ಟೇರ್‌ ಹೆಚ್ಚಿದರೆ, 2021-22ನೇ ಸಾಲಿನಲ್ಲಿ 1593 ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗಿದೆ. ಅದರಲ್ಲೂ ಹಾನಗಲ್ಲ ತಾಲೂಕಿನಲ್ಲಿ 1016 ಹೆಕ್ಟೇರ್‌, ಹಿರೇಕೆರೂರು ತಾಲೂಕಿನಲ್ಲಿ 812, ಬ್ಯಾಡಗಿ ತಾಲೂಕಿನಲ್ಲಿ 391 ಹೆಕ್ಟೇರ್‌, ರಾಣಿಬೆನ್ನೂರು ತಾಲೂಕಿನಲ್ಲಿ 133 ಹೆಕ್ಟೇರ್‌, ಶಿಗ್ಗಾವಿ ತಾಲೂಕಿನಲ್ಲಿ 100 ಹೆಕ್ಟೇರ್‌ ಸೇರಿದಂತೆ ಎರಡು ವರ್ಷಗಳ ಅವಧಿಯಲ್ಲಿ 2494 ಹೆಕ್ಟೇರ್‌ ಅಡಕೆ ಬೆಳೆ ಪ್ರದೇಶ ವಿಸ್ತರಣೆಯಾಗಿದೆ.

‌ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅಡಕೆ ಬೆಳೆ ಪ್ರದೇಶ ಏಕಾಏಕಿ ಹೆಚ್ಚಾಗಿದೆ. ಉತ್ತಮ ದರ ಸಿಗುತ್ತಿರುವುದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಕೆ ಕ್ಷೇತ್ರ ವಿಸ್ತರಣೆಗೆ ಅವಕಾಶ ಇರುವುದರಿಂದ ರೈತರು ಆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಎರಡೇ ವರ್ಷಗಳಲ್ಲಿ ಸುಮಾರು ಎರಡೂವರೆ ಸಾವಿರ ಹೆಕ್ಟೇರ್‌ ಅಡಕೆ ಬೆಳೆ ಕ್ಷೇತ್ರ ಹೆಚ್ಚಿದೆ. –ಎಲ್‌.ಪ್ರದೀಪ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು     

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next