ಹುಮನಾಬಾದ: ಜಿಲ್ಲೆಯ ರೈತರು ಮತ್ತು ಕಾರ್ಖಾನೆಯ ಕಾರ್ಮಿಕರ ಹಿತರಕ್ಷಣೆಗೆ ಸಚಿವ ಬಂಡೆಪ್ಪ ಖಾಶೆಂಪೂರ ಮತ್ತು ತಾವು ಯಾವತ್ತೂ ಬದ್ಧವಿರುವುದಾಗಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಹಳ್ಳಿಖೇಡ(ಬಿ) ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಗೊಂಡ ನಂತರ ಮೊದಲ ಬಾರಿಗೆ ಸಚಿವರಿಬ್ಬರು ಜಂಟಿಯಾಗಿ ಭೇಟಿನೀಡಿ, ಪರಿಶೀಲನೆ ವೇಳೆ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಜೀವನಾಡಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮೇಲೆ ರೈತರು ಹಾಗೂ ಕಾರ್ಮಿಕರು ಇಟ್ಟಿರುವ ವಿಶ್ವಾಸಕ್ಕೆ ಕಾರ್ಖಾನೆ ಆಡಳಿತ ಮಂಡಳಿಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆ. ಜಿಲ್ಲೆಯ ಮಹಾತ್ಮಾ ಗಾಂಧಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ, ಬೀದರ್ ಕಿಸಾನ ಸಹಕಾರ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಸಹಕಾರ ಸಕ್ಕರೆ ಕಾರ್ಖಾನೆಗಳಿದ್ದರೂ ಸಹ ಜಿಲ್ಲೆಯ ರೈತರ ಭಕ್ತಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮೇಲೆ ಇದೆ. ಇನ್ನೊಂದು ಬಾಯ್ಲರ್ ಆರಂಭಗೊಂಡರೆ ಕಬ್ಬು ನುರಿಸುವಿಕೆ ಪ್ರಮಾಣ ಹೆಚ್ಚಲಿದೆ ಎಂದ ಅವರು, ಕಳೆದ ಹಂಗಾಮಿನಲ್ಲಿ ಉತ್ಪನ್ನವಾದ ಮಾದರಿಯಲ್ಲಿ ಸಕ್ಕರೆ ಸ್ವಲ್ಪ ಕಪ್ಪಾಗಿರುವುದು ತಿಳಿದುಬಂದಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ, ಗುಣಮಟ್ಟದ ಸಕ್ಕರೆ ಉತ್ಪನ್ನಗೊಳಿಸಲಾಗುವುದು ಎಂದರು.
ಈ ಹಿಂದೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ 64 ಮತ್ತು 69 ವಿಚಾರಣೆಯಂಥ ಪ್ರಕರಣಗಳು ಮರುಕಳಿಸದಂತಾಗಬೇಕು. ನಮ್ಮಿಬ್ಬರ ಶ್ರಮ ಸಾರ್ಥಕವಾಗಬೇಕಾದರೆ ಜಿಲ್ಲೆಯ ರೈತರು, ಕಾರ್ಖಾನೆ ಕಾರ್ಮಿಕರು ಈವರೆಗೆ ನೀಡಿದ ಸಹಕಾರವನ್ನು ಭವಿಷ್ಯದಲ್ಲೂ ಮುಂದುವರೆಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ|ಚಂದ್ರಶೇಖರ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಒಬ್ಬಣಗೋಳ್, ಹಂಗಾಮಿ ಅಧ್ಯಕ್ಷ ದತ್ತಾತ್ರೇಯ ಬಾಚೆಪಲ್ಲಿ, ನಿರ್ದೇಶಕರೂ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ಮಾಜಿ ಉಪಾಧ್ಯಕ್ಷ ವೀರಣ್ಣ ಪಾಟೀಲ, ಕಾಂಗ್ರೆಸ್ ಮುಖಂಡರಾದ ಪ್ರಕಾಶ ಕಾಡಗೊಂಡ, ಸಿದ್ರಾಮ ವಾಗ್ಮಾರೆ, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಶಿವಶರಣಪ್ಪ ಇದ್ದರು.